ಹಸಿರು ಕ್ರಾಂತಿ ವರದಿ, ಜಮಖಂಡಿ; ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಬೆಳೆಗೆ ಪ್ರತಿಟನ್ಗೆ 4 ಸಾವಿರ ರೂ ದರ ನಿಗದಿ ಪಡಿಸಬೇಕು, ಕೇಂದ್ರಸರ್ಕಾರ ಎಫ್ಆರ್ಪಿ ದರವನ್ನು ಹೆಚ್ಚಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಬ್ಬುಬೆಳೆಗಾರರ ಸಂಘ ಆಗ್ರಹಿಸಿದೆ. ಸಂಘದ ತಾಲೂಕು ಅಧ್ಯಕ್ಷ ಹಣಮಂತ ಮಗದುಮ ನಗರದ ರಮಾನಿವಾಸ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರೈತರು ಬೆಳೆದ ಬೆಳೆಗಳಿಗೆ ಯೋಗ್ಯವಾದ ಬೆಲೆ ಸಿಕ್ಕುತ್ತಿಲ್ಲ, ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳ ದರ ಹೆಚ್ಚಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದರು. ಕಬ್ಬು ಬೆಳೆಯಲು ರೈತರಿಗೆ ಸಾಕಷ್ಟು ಕರ್ಚು ಬರುತ್ತದೆ. ವಾರ್ಷಿಕ ಬೆಳೆಯಾಗಿರುವದರಿಂದ ನಿರ್ವಹಣೆ ಸುಲಭವಾಗಿಲ್ಲ. ಕಳೆದು 10 ವರ್ಷಗಳಿಂದ ಎಫ್ ಆರ್ ಪಿ ದರವನ್ನು ಹೆಚ್ಚಿಸಲಾಗಿಲ್ಲ ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಹೇಳಿದರು.
ಬಾಕಿ ಬಿಡುಗಡೆ ಗೊಳಿಸಿ; 2021-22 ನೇ ಸಾಲಿನ 62 ರೂ ಹಾಗೂ ಕಳೆದ ವರ್ಷ ದ 200 ರೂಗಳ ಕಬ್ಬಿನ ಬಾಕಿ ಹಣವನ್ನು ಬಿಡುಗಡೆ ಗೊಳಿಸಬೇಕು, ಸರ್ಕಾರ ಈ ಕುರಿತು ಬಾಕಿ ಉಳಿಸಿ ಕೊಂಡಿರುವ ಕಾರ್ಖಾನೆ ಮಾಲಿಕರಿಗೆ ಸೂಚನೆ ನೀಡುವ ಮೂಲಕ ಕೂಡಲೇ ಕಬ್ಬಿನ ಬಾಕಿ ಹಣವನ್ನು ಬಿಡುಗಡೆ ಗೊಳಿಸಲು ಆದೇಶಿಸ ಬೇಕು ಎಂದು ಆಗ್ರಹಿಸಿದರು.
ಯುಕೆಪಿ ; ಕೃಷ್ಣಾ ಮೇಲ್ದಂಡೆ ಯೋಜನೆಗೆ ಸರ್ಕಾರ ನೀರಾವರಿಗೆ 40 ಲಕ್ಷ ಹಾಗೂ ಒಣ ಬೇಸಾಯಕ್ಕೆ 30 ಲಕ್ಷ ಪ್ರತಿ ಎಕರೆ ದರ ನಿಗದಿ ಪಡಿಸಿರುವದನ್ನು ಹೆಚ್ಚಿಸಿ 50 ಹಾಗೂ 40 ಲಕ್ಷಕ್ಕೆ ಏರಿಸಬೇಕು, ಕಲ್ಲಳ್ಳಿಯ ವೆಂಕಟೇಶ್ವರ ಏತನೀರಾವರಿ ಯೋಜನೆಯನ್ನು ಪೂರ್ಣ ಗೊಳಸಬೇಕು, ಜಮೀನು ಕಳೆದು ಕೊಂಡಿರುವ ರೈತರಿಗೆ ಸಂಪೂರ್ಣ ಪರಿಹಾರ ಬಿಡುಗಡೆ ಗೊಳಿಸಬೇಕು ಎಂದು ಆಗ್ರಹಿಸಿದರು. ರೈತ ಬಸವರಾಜ ನ್ಯಾಮಗೌಡ ಮಾತನಾಡಿ ಸಿರಗುಪ್ಪಿ ರಸ್ತೆ ಹದಗೆಟ್ಟು ಹೋಗಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕೂಡಲೇ ರಸ್ತೆ ದುರಸ್ತಿಕಾರ್ಯವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತ ಮುಖಂಡರಾದ ಸುರೇಶ ಪಾಲಬಾಂವಿ, ಶಿವಲಿಂಗಪ್ಪ ತುಬಚಿ, ದರೆಪ್ಪ ಬೆಳಗಲಿ, ಮಕಬುಲ್ಸಾಬ್, ಶ್ರೀಶೈಲ ತಿಪ್ಪಣ್ಣವರ. ಶಮನ್ಸಾಬ ಮುಲ್ಲಾ ಮುಂತಾದವರಿದ್ದರು.


