ಅಥಣಿ: ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಕೇವಲ ಮಹಾ ಕಾವ್ಯವಲ್ಲ, ಅದೊಂದು ನಮ್ಮೆಲ್ಲರ ಬದುಕಿಗೆ ದಾರಿದೀಪ ಎಂದು ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ ಹೇಳಿದರು.
ಅವರು ತಾಲೂಕ ಆಡಳಿತ, ತಾಲೂಕ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಕಾರ್ಯಾಲಯ ಇವರ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ
ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಸಿದರಾಯ ಬೋಸಗಿ ಮಾತನಾಡಿ ಮಹರ್ಷಿ ವಾಲ್ಮೀಕಿ ಒಬ್ಬ ತತ್ವಜ್ಞಾನಿ, ಆದಿ ಕವಿಯಾಗಿ ರಾಮಾಯಣ ಎಂಬ ಮಹಾಕಾವ್ಯವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾರೆ. ರಾಮಾಯಣವು ಸತ್ಯ ಮತ್ತು ಧರ್ಮದ ನಡುವೆ ಇರುವ ವ್ಯತ್ಯಾಸ ಮತ್ತು ಪರಿಣಾಮಗಳನ್ನು ಸಾರಿ ಹೇಳುತ್ತದೆ. ವಾಲ್ಮೀಕಿ ಅವರ ಆದರ್ಶಗಳು ನಮ್ಮ ಬದುಕಿಗೆ ಬೆಳಕಾಗಬೇಕು. ಬೇಡರ ಸಮುದಾಯದಲ್ಲಿ ಜನಿಸಿರಬಹುದು, ಆದರೆ ಅವರ ತತ್ವಾದರ್ಶಗಳು ಇಡೀ ಮನುಕುಲಕ್ಕೆ ದಾರಿದೀಪವಾಗಿವೆ. ಅಂತಹ ಮಹನೀಯರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸದೆ ಎಲ್ಲರೂ ಒಗ್ಗಟ್ಟಿನಿಂದ ಅವರ ಜಯಂತಿ ಆಚರಿಸುವ ಮೂಲಕ ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಬೇಕು ಎಂದು ಹೇಳಿದರು.
ಅತಿಥಿ ಉಪನ್ಯಾಸಕರಾಗಿದ್ದ ಶಿಕ್ಷಕ ಸಂಗಮೇಶ ಹಚ್ಚಡದ ಮಾತನಾಡಿ ದರೋಡೆಕರ ಮತ್ತು ಬೇಟೆಗಾರನಾಗಿದ್ದ ರತ್ನಾಕರ ನಾರದಮುನಿಗಳು ನೀಡಿದ ಮಂತ್ರದಿಂದ ಪ್ರಭಾವಿತನಾಗಿ ಮುಂದೆ ವಾಲ್ಮೀಕಿ ಮಹರ್ಷಿಯಾಗಿ ಪರಿವರ್ತನೆ ಹೊಂದುತ್ತಾರೆ. ಅವರು ನೀಡಿದ ಸಂದೇಶದಂತೆ ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆದು ನಮ್ಮ ಬದುಕನ್ನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮತ್ತು ವಿವಿಧ ವೃತ್ತಿಪರ ಕೋರ್ಸ್ ಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸಾಯಿ ಸಮಿತಿಯ ಅಧ್ಯಕ್ಷ ದತ್ತಾ ವಾಸ್ಟರ, ಉಪಾಧ್ಯಕ್ಷೆ ಭುವನೇಶ್ವರಿ
ಯಕ್ಕoಚಿ, ಸದಸ್ಯ ಬಸವರಾಜ ನಾಯಿಕ, ವಾಲ್ಮೀಕಿ ಸಮುದಾಯದ ಮುಖಂಡ ಬಾಬು ಹುಲ್ಯಾಳ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಿದ್ಧಾರ್ಥ ಶಿಂಗೆ, ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಆರ್. ಮುಂಜೆ, ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ಪಶು ವೈದ್ಯಧಿಕಾರಿ ಡಾ.ಎಂ.ಎಸ್. ಹುಂಡೆಕಾರ, ಬಿಸಿಯೂಟ ನಿರ್ದೇಶಕ ಎಂ. ಎನ್. ನಾಮದಾರ ಸೇರಿದಂತೆ ಬಾಬು ಹುಲ್ಯಾಳ ಸಿದ್ದಪ್ಪ ಸನದಿ ಲಕ್ಕಪ್ಪ ನಾಯ್ಕ ಶ್ರೀಮಂತ ನಡವಿನಮನಿ ಅಭಿಜನೂರ್ ಅಭಾಜಿತ್ ಭೋಜಣ್ಣವರ ಇನ್ನಿತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಅಧಿಕಾರಿ ಪರಶುರಾಮ ಪತ್ತಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎ ಎಚ್ ಮುಜಾವರ ಮತ್ತು ಸಿ.ಟಿ ಬಡಕಂಬಿ ನಿರೂಪಿಸಿದರು.
ಓಗೆಪ್ಪ ಅರಟಾಳ ವಂದಿಸಿದರು.