ಬೆಳಗಾವಿ: ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ತಮ್ಮ 26ನೇ ಹುಟ್ಟುಹಬ್ಬದ ನಿಮಿತ್ತ ಇಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೀದಿಬದಿ ವ್ಯಾಪಾರಸ್ಥರಿಗೆ ದೊಡ್ಡ ಗಾತ್ರದ ಛತ್ರಿಗಳನ್ನು ಉಚಿತವಾಗಿ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ 2 ಸಾವಿರ ಛತ್ರಿ ಕೋಡಲಾಗುತ್ತಿದೆ. ನಗರಕ್ಕೆ 800 ಛತ್ರಿ ಕೋಡಲಾಗಿದೆ. ಗೋಕಾಕ ಸಂಕೇಶ್ವರ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಹಾರೂಗೇರಿ ಕಡೆಗಳಲ್ಲಿ ಸುಮಾರು ಛತ್ರಿಗಳನ್ನು ನೀಡಲಾಗಿದೆ. ಈ ಛತ್ರಿ ನೀಡಬೇಕೆಂದು ಮೊದಲಿನಿಂದ ಬೇಡಿಕೆಯಿತ್ತು ಆದ್ದರಿಂದ ಇಂದು ನಾವು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ಜನ್ಮದಿನದ ನಿಮಿತ್ತ ಬೀದಿಬದಿ ವ್ಯಾಪಾರಿಗಳಿಗೆ ಛತ್ರಿ ನೀಡಿದ್ದೇವೆ ಎಂದರು.
ಬೀದಿಬದಿ ವ್ಯಾಪಾರಿಗಳು ಶ್ರಮಜೀವಿಗಳಾಗಿದ್ದು ಬಿಸಿಲು, ಮಳೆ ಲೆಕ್ಕಿಸದೇ ಸ್ವಾಭಿಮಾನ ಬದುಕು ಕಟ್ಟಿಕೊಂಡಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸುವುದು ನಮ್ಮಲ್ಲೆರ ಕರ್ತವ್ಯವಾಗಿದೆ ಎಂದರು. ಈ ವೇಳೆ ಬೀದಿಬದಿ ವ್ಯಾಪಾರಸ್ಥರು ಲೋಕೋಪಯೊಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕುರಿ ಕಂಬಳಿ ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ ಜೆ., ಕೆಪಿಸಿಸಿ ಸದಸ್ಯರಾದ ಮಲಗೌಡ ಪಾಟೀಲ್, ಸತೀಶ್ ಜಾರಕಿಹೊಳಿ ಫೌಂಡೇಶನ್ ಮುಖ್ಯಸ್ಥ ಜುಬೇರ್ ಮಿರ್ಜಾಬಾಯಿ ಸೇರಿದಂತೆ ಇತರರು ಇದ್ದರು.