ಬೆಂಗಳೂರು, ಅಕ್ಟೋಬರ್ 06: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಂದರೆ ಮುಡಾ ಇದರಲ್ಲಿನ ನಿವೇಶನ ಹಂಚಿಕೆ ಹಗರಣ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬಿರುಗಾಳಿ ಎಬ್ಬಿಸಿತ್ತು. ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಅಧಿಕಾರಿಗಳೇ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಅಕ್ರಮವಾಗಿ ನೀಡಿದ್ದ 440 ಕೋಟಿ ರೂ ಮೌಲ್ಯದ 252 ನಿವೇಶನಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ
ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಇ.ಡಿ ಅಧಿಕಾರಿಗಳು, 252 ಸೈಟ್ಗಳನ್ನು ಅಧಿಕಾರಿಗಳು ಅಕ್ರಮವಾಗಿ ಅಲಾಟ್ ಮಾಡಿದ್ದು ಪತ್ತೆ ಆಗಿದೆ. ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಳಿಯ 40.8 ಕೋಟಿ ರೂ. ಮೌಲ್ಯದ 32 ಸೈಟ್ಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕುಟುಂಬಸ್ಥರ ಹೆಸರಿನಲ್ಲಿ ದಿನೇಶ್ ಕುಮಾರ್ ಆಸ್ತಿ ಮಾಡಿದ್ದರು.
ಇತ್ತೀಚೆಗೆ ಇ.ಡಿ ಅಧಿಕಾರಿಗಳು ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ನನ್ನು ಬಂಧಿಸಿದ್ದರು. ನಕಲಿ ದಾಖಲೆಗಳನ್ನು ದಿನೇಶ್ ಸೃಷ್ಟಿ ಮಾಡಿ ಆ ಮೂಲಕ ಸೈಟ್ಗಳನ್ನು ಮರುಹಂಚಿಕೆ ಮಾಡಿ ಲಾಭ ಮಾಡಿಕೊಂಡಿದ್ದರು. ಇದಕ್ಕೆ ಸಾಕ್ಷ್ಯ ಎಂಬಂತೆ ಹಣ ಪಡೆದು ಆಸ್ತಿ ಗಳಿಕೆ ಮಾಡಿರುವುದಕ್ಕೆ ದಾಖಲೆ ಪತ್ತೆಯಾಗಿದೆ ಎಂದು ಇಡಿ ಹೇಳಿತ್ತು.
ಇನ್ನು 2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಬೆನ್ನಲ್ಲೇ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ತಿಂಗಳ ಹಿಂದೆ ಇ.ಡಿ ಅಧಿಕಾರಿಗಳು 100 ಕೋಟಿ ರೂ. ಮೌಲ್ಯದ 92 ಸೈಟ್ಗಳನ್ನು ಜಪ್ತಿ ಮಾಡಿದ್ದರು. ಪಿಎಂಎಲ್ಎ- ಅಂದರೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿತ್ತು. ಇದರೊಂದಿಗೆ ಒಟ್ಟು 400 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಂತೆ ಆಗಿತ್ತು.