ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯಲರ್ ಪ್ರದೀಪನ; ಪ್ರಸಕ್ತ ವರ್ಷ 8 ಲಕ್ಷ ಟನ್ ಕಬ್ಬು ನುರಿಸುವ ಗುರಿ : ಪರಪ್ಪ ಸವದಿ 

Ravi Talawar
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯಲರ್ ಪ್ರದೀಪನ; ಪ್ರಸಕ್ತ ವರ್ಷ 8 ಲಕ್ಷ ಟನ್ ಕಬ್ಬು ನುರಿಸುವ ಗುರಿ : ಪರಪ್ಪ ಸವದಿ 
WhatsApp Group Join Now
Telegram Group Join Now
ಅಥಣಿ : ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ 2025- 26 ನೇ ಸಾಲಿನ 24 ನೇ ಹಂಗಾಮಿನ ಬಾಯಲರ  ಪ್ರದೀಪನ ಪೂಜಾ ಸಮಾರಂಭವು ಹೋಮ ಹವನದೊಂದಿಗೆ ಜರುಗಿತು. ಕಾರ್ಖಾನೆಯ ಅಧ್ಯಕ್ಷ ಪರಪ್ಪಾ ಸವದಿ ಅವರ ನೇತೃತ್ವದಲ್ಲಿ ಮಠಾಧೀಶರು ಆಡಳಿತ ಮಂಡಳಿಯ ಸದಸ್ಯರೊಂದಿಗೆ ಬಾಯಲರ್ ಪ್ರದೀಪನ ಮಾಡಲಾಯಿತು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ ತಾಲೂಕಿನ ಅನೇಕ ಕಬ್ಬು ಬೆಳೆಗಾರರು, ರೈತರೇ ಕಟ್ಟಿ ಬೆಳೆಸಿದ ಕಾರ್ಖಾನೆ ಇದಾಗಿದ್ದು, ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಶ್ರೇಯಸ್ಸು ರೈತರ ಕೈಯಲ್ಲಿದೆ. ಆದ್ದರಿಂದ ನಮ್ಮ ರೈತ ಪ್ರಸಕ್ತ ಹಂಗಾಮಿಗೆ ಅತಿ ಹೆಚ್ಚು ಗುಣಮಟ್ಟದ ಕಬ್ಬು ಸರಬರಾಜ ಮಾಡಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿ ಸಹಕಾರ ತತ್ವದ ಆಧಾರದ ಮೇಲೆ ಸ್ಥಾಪಿತಗೊಂಡಿರುವ ಕೆಲವೇ ಕೆಲವು ಕಾರ್ಖಾನೆಗಳಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯೂ ಒಂದಾಗಿದ್ದು. ಪಾರದರ್ಶಕವಾಗಿ ಉತ್ತಮ ಆಡಳಿತ ನಿರ್ವಹಣೆಯೊಂದಿಗೆ ಪ್ರಗತಿ ಪಥದಲ್ಲಿ ಸಾಗಿದೆ. ಇತರೆ ಸಕ್ಕರೆ ಕಾರ್ಖಾನೆಗಳಿಗಿಂತ ಕಬ್ಬು ಪೂರೈಸುವ ರೈತರಿಗೆ ಹೆಚ್ಚಿನ ದರವನ್ನು ಕೊಡುವ ಮೂಲಕ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ ಎಂದರು
ರೈತರು, ಕಬ್ಬು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಬೇಕು. ಕಳೆದ ಹಂಗಾಮಿನಲ್ಲಿ ರೈತರು ಕಾರ್ಖಾನೆಗೆ ಸರಿಯಾಗಿ ಕಬ್ಬು ಪೂರೈಸದೆ ಇರುವುದರಿಂದ ಕೇವಲ 4 ಲಕ್ಷ ಟನ್ ಕಬ್ಬು ಮಾತ್ರ ನುರಿಸಲಾಗಿದೆ. ಆದ್ದರಿಂದ ಕಾರ್ಖಾನೆಗೆ 35 ಕೋಟಿ ರೂಗಳ ನಷ್ಟವಾಗಿದೆ. ಕಾರ್ಖಾನೆಯನ್ನು ಉಳಿಸಿ ಬೆಳೆಸುವುದು ರೈತರ ಕೈಯಲ್ಲಿ ಇದೆ. ಈ ವರ್ಷ ಕಬ್ಬಿನ ಬೆಳೆ ಚೆನ್ನಾಗಿದ್ದು ಅಧಿಕ ಇಳುವರಿ ಇರುವ ಉತ್ತಮ ಗುಣಮಟ್ಟದ ಕಬ್ಬುನ್ನು ಕಾರ್ಖಾನೆಗೆ ಪೂರೈಸಿ ಕಾರ್ಖಾನೆಯನ್ನು ಪ್ರಗತಿ ಪಥದತ್ತ ಕೊಂಡೊಯ್ಯಬೇಕು ಎಂದು ಮನವಿ ಮಾಡಿದ ಅವರು ಪ್ರಸಕ್ತ ಹಂಗಾಮಿನಲ್ಲಿ 8 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಅಧ್ಯಕ್ಷ ಪರಪ್ಪ ಸವದಿ ತಿಳಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕೌಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿ ಸಹಕಾರಿ ಸಕ್ಕರೆ ಕಾರ್ಖಾನೆಗಳು ಉಳಿಸುವ ಮಹತ್ತರವಾದ ಜವಾಬ್ದಾರಿ ರೈತರ ಮೇಲಿದೆ. ತಾಲೂಕಿನ ಲಕ್ಷಾಂತರ ರೈತರ ಬಾಳಿಗೆ ಬೆಳಕಾಗಿರುವ ಮತ್ತು ನೂರಾರು ಕಾರ್ಮಿಕರಿಗೆ ಉದ್ಯೋಗವನ್ನು ಕಲ್ಪಿಸಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಕಾರ್ಖಾನೆಯಾಗಿದೆ. ಕಾರ್ಖಾನೆ ಲಾಭ ದತ್ತ ಸಾಗಬೇಕಾದರೆ ಮೊದಲು ಆಡಳಿತ ಮಂಡಳಿ ಸದಸ್ಯರು ಮತ್ತು ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಸ್ವಾಭಿಮಾನಿಗಳಾಗಿ ಪ್ರಾಮಾಣಿಕತೆಯಿಂದ ಸೇವೆ ಮಾಡಬೇಕು. ಎಲ್ಲಿ ಹೆಚ್ಚು ಲಾಭ ಸಿಗುತ್ತದೆ, ಎಲ್ಲಿ ಪುಕ್ಕಟ್ಟೆ ಯೋಜನೆಗಳು ಸಿಗುತ್ತವೆ ಅತ್ತ ನಮ್ಮ ಜನರು ಮತ್ತು ರೈತರು ಹೋಗುತ್ತಿರುವುದು ದುರಾದೃಷ್ಟಕರ. ಒಂದಿಷ್ಟು ಲಾಭ ಕಡಿಮೆ ಬಂದರೂ ಸ್ವಾಭಿಮಾನಿಗಳಿಂದ ನಮ್ಮ ಕಾರ್ಖಾನೆಯನ್ನು ಉಳಿಸಿ ಬೆಳೆಸೋಣ ಎಂಬ ಭಾವ ರೈತರಲ್ಲಿ ಮತ್ತು ರೈತ ಮುಖಂಡರಲ್ಲಿ ಇರಬೇಕು. ಇಲ್ಲಿ ಪಾರದರ್ಶಕ ಮತ್ತು ಪ್ರಾಮಾಣಿಕ ಸೇವೆ ನೀಡುತ್ತಿದ್ದಾರೆ ಎನ್ನುವ ವಿಶ್ವಾಸ ರೈತರಲ್ಲಿ ಮೂಡಬೇಕು. ಅದರ ಜೊತೆಗೆ ಸಕ್ಕರೆ ಉತ್ಪಾದನೆ ಜೊತೆಗೆ ಇನ್ನಿತರ ವಿವಿಧ ಲಾಭದಾಯಕ ಯೋಜನೆಗಳನ್ನ ರೂಡಿಸಿಕೊಂಡು ಲಾಭಗಳಿಸುವ ಮೂಲಕ ರೈತರಿಗೆ ನಿಗದಿತ ಅವಧಿಯಲ್ಲಿ ನ್ಯಾಯಯುತ ಬೆಲೆ ನೀಡಲು ಆಡಳಿತ ಮಂಡಳಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕಾರ್ಖಾನೆಯ ಕೃಷಿ ಅಧಿಕಾರಿಗಳು ಪ್ರತಿ ರೈತರ ಮನೆ ಬಾಗಿಲಿಗೆ ಹೋಗಿ, ಕಬ್ಬು ಕಳಿಸುವಂತೆ ಮನವರಿಕೆ ಮಾಡಿ, ನಮ್ಮ ಕಾರ್ಖಾನೆಗೆ ಕಬ್ಬು ಕೊಟ್ಟರೆ ತೂಕದಲ್ಲಿ ಒಂದು ಕೆಜಿಯೂ ವ್ಯತ್ಯಾಸ ಆಗುವುದಿಲ್ಲ ಎಂದು ಭರವಸೆ ನೀಡಬೇಕು. ನಿಮ್ಮಿಂದ ಪ್ರಾಮಾಣಿಕ ಕೆಲಸವಾದಾಗ ಮಾತ್ರ ರೈತರು ಇದನ್ನು ‘ನನ್ನ ಕಾರ್ಖಾನೆ’ ಎಂದು ಭಾವಿಸುತ್ತಾರೆ. ತಾಲೂಕಿನ ರೈತ ಬಾಂಧವರು ಕೂಡ ನಮ್ಮ ಕಾರ್ಖಾನೆ ಎಂಬ ಭಾವದಿಂದ ಕಬ್ಬು ಕಳಿಸುವ ಮೂಲಕ ನಷ್ಟದಲ್ಲಿರುವ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ, ಹಲ್ಯಾಳ ವಿರಕ್ತ ಮಠದ ಅಭಿನವ ಗುರುಸಿದ್ಧ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ವೇಳೆ ಕಾರಖಾನೆ ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕರಾದ ಗುರುಬಸು ತೇವರಮನಿ, ಶಾಂತಿನಾಥ ನಂದೇಶ್ವರ, ರುಕ್ಮೀಣಿ ಕುಲಕರ್ಣಿ, ರಮೇಶ ಪಟ್ಟಣ, ಸೌರಭ ಪಾಟೀಲ, ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ ಗೋಟಖಿಂಡಿ, ಗೂಳಪ್ಪ ಜತ್ತಿ. ಹಣಮಂತ ಜಗದೇವ, ಪ್ರಲ್ಹಾದ ಪಾಟೀಲ, ವಿಶ್ವನಾಥ ಪಾಟೀಲ, ಮಲ್ಲೇಶ್ ಸವದಿ. ಶಿವಾನಂದ ಸವದಿ, ದುಂಡಪ್ಪ ಅಸ್ಕಿ. ಶ್ರೀಶೈಲ ನಾರಗೊಂಡ. ಮಹಾದೇವ ಬಿಳಿಕುರಿ. ಸಂಜಯ ನಾಡಗೌಡ. ಬಾಳೇಶ ಸವದಿ,  ರಮೇಶ ಸವದಿ,  ವ್ಯವಸ್ಥಾಪಕ ನಿರ್ದೇಶಕ ಜಿ ಎಮ್ ಪಾಟೀಲ. ಕಛೇರಿ ಅಧೀಕ್ಷಕ ಸುರೇಶ ಠಕ್ಕಣ್ಣವರ ಸೇರಿದಂತೆ ಅನೇಕ ರೈತ ಮುಖಂಡರು, ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು. ಗೂಳಪ್ಪ ಜತ್ತಿ ಸ್ವಾಗತಿಸಿದರು. ಸುರೇಶ ಠಕ್ಕಣ್ಣವರ ನಿರೂಪಿಸಿದರು. ಎಸ್ ಬಿ. ಗೋಟಖಿoಡಿ ವಂದಿಸಿದರು.
WhatsApp Group Join Now
Telegram Group Join Now
Share This Article