ಬೆಂಗಳೂರು, ಅಕ್ಟೋಬರ್ 03: ಕರ್ನಾಟಕ ರಾಜ್ಯ ಹಿಂದೂಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉರುಫ್ ಜಾತಿ ಗಣತಿ ರಾಜ್ಯದಲ್ಲಿಈವರೆಗೆ ಶೇ.63ರಷ್ಟು ಸಮೀಕ್ಷೆ ಆಗಿದೆ. ಒಟ್ಟು 90 ಲಕ್ಷದ 61 ಸಾವಿರದ 880 ಮನೆಗಳ ಸಮೀಕ್ಷೆ ಮಾಡಲಾಗಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಜಾತಿ ಗಣತಿ ಆರಂಭಿಸಲಾಗಿತ್ತು. ಆರಂಭದಲ್ಲಿ ಗೊಂದಲದ ಬೆಟ್ಟವಾಗಿದ್ದ ಸಮೀಕ್ಷೆ ಕಾರ್ಯ ಬಳಿಕ ಸಮಸ್ಯೆಗಳನ್ನ ಸರಿಪಡಿಸಿಕೊಂಡು ಸಾಗಿತ್ತು. ಸದ್ಯ ಈವರೆಗೆ ರಾಜ್ಯದಲ್ಲಿ 90 ಲಕ್ಷ ಮನೆಗಳು ಸರ್ವೆ ಮುಕ್ತಾಯವಾಗಿದೆ. ಅಕ್ಟೋಬರ್ 7ಕ್ಕೆ ಸಮೀಕ್ಷೆ ಮುಗಿಯಲಿದೆ. ಆ ಮೂಲಕ ಜಾತಿಗಣತಿ ಸರ್ವೆ ಕಾರ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.
ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ಸುಮಾರು 80 ಲಕ್ಷ ಮನೆಗಳಿಂದ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣಗೊಂಡಿದ್ದು, ಅಕ್ಟೋಬರ್ 7ರೊಳಗೆ ಸಮೀಕ್ಷೆ ಕಾರ್ಯ ಮುಗಿಯುವ ಭರವಸೆಯಿದೆ. 1.80 ಕೋಟಿ ಕುಟುಂಬಗಳ ಸಮೀಕ್ಷೆ ನಡೆಯಬೇಕಿದೆ. ಸಮೀಕ್ಷೆಯ ಪ್ರಗತಿಯನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


