ಬೆಳಗಾವಿ, ಅಕ್ಟೋಬರ್ 4: ಮನೆ ಮುಂದೆ ಕಲ್ಲುಗಳ ರಾಶಿಯೇ ಬಿದ್ದಿದೆ. ಬೀದಿಯಲ್ಲಿ ಜನ ಆತಂಕದಿಂದ ನಿಂತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಬೆಳಗಾವಿಯ ಖಡೇಬಜಾರ್ನ ಖಡಕ್ ಗಲ್ಲಿಯಲ್ಲಿ ಶುಕ್ರವಾರ ರಾತ್ರಿ. ಬೆಳಗಾವಿಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಆಗಾಗ್ಗೆ ಕೋಮು ಸಂಘರ್ಷದ ಕಿಡಿ ಹೊತ್ತುತ್ತಲೇ ಇರುತ್ತದೆ. ಶುಕ್ರವಾರ ನಡೆದ ಉರುಸ್ ಮೆರವಣಿಗೆ ಹಿಂದೂ-ಮುಸ್ಲಿಮರ ನಡುವೆ ಜಟಾಪಟಿಗೆ ಕಾರಣವಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಮಾಬುಸುಬಾನಿ ದರ್ಗಾ ಉರುಸ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ಖಡಕ್ ಗಲ್ಲಿ ಮೂಲಕ ಮೆರವಣಿಗೆ ಸಾಗಿದೆ. ಕೆಲ ಯುವಕರು ‘ಐ ಲವ್ ಮೊಹಮ್ಮದ್’ ಎಂಬ ಘೋಷಣೆ ಕೂಗುತ್ತಾ ತೆರಳಿದ್ದಾರೆ. ಇದು ಸ್ಥಳೀಯ ಹಿಂದೂಗಳನ್ನು ಕೆರಳಿಸಿದ್ದು ಇದಕ್ಕೆ ಆಕ್ಷೇಪಿಸಿದ್ದಾರೆ. ಆದರೆ, ಇದಾದ ಕೆಲಹೊತ್ತಿನಲ್ಲೇ ಅನ್ಯಕೋಮಿನ ಯುವಕರು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಲ್ವಾರ್ ಪ್ರದರ್ಶಿಸಿ ಗೂಂಡಾವರ್ತನೆ ತೋರಿದ ಆರೋಪ ಕೇಳಿಬಂದಿದೆ.
ಪ್ರತಿ ವರ್ಷ ಜಾಲ್ಗಾರ ಗಲ್ಲಿ ಮತ್ತು ಶನಿವಾರ ಕೂಟ ಗಲ್ಲಿ ಮೂಲಕ ದರ್ಗಾಕ್ಕೆ ಉರುಸ್ ಮೆರವಣಿಗೆ ಹೋಗುತ್ತಿತ್ತು. ಆದರೆ, ಈ ಬಾರಿ ಪೊಲೀಸರ ಅನುಮತಿ ಇಲ್ಲದಿದ್ದರೂ ಮರಾಠಿ ಸಮುದಾಯದವರೇ ಹೆಚ್ಚಿರುವ ಖಡಕ್ ಗಲ್ಲಿಯಲ್ಲಿ ಉರುಸ್ ಮೆರವಣಿಗೆ ಸಾಗಿದೆ. ಇದೇ ಸ್ಥಳೀಯ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.


