ಧರ್ಮಸ್ಥಳ, ಅ.3: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ವಿಶೇಷ ತನಿಖಾ ತಂಡ ಮತ್ತಷ್ಟು ಚುರುಕುಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೊಗಳನ್ನು ತಯಾರಿಸಿದ ಹಲವಾರು ಯೂಟ್ಯೂಬರ್‌ಗಳಿಗೆ SIT ಅಧಿಕಾರಿಗಳು ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಈ ಬೆಳವಣಿಗೆಯಿಂದ ಯೂಟ್ಯೂಬರ್‌ಗಳ ಸಂಕಷ್ಟ ಮುಗಿಯುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ವಿವಾದಿತ ಯೂಟ್ಯೂಬರ್ ಸಮೀರ್ ಎಂಡಿ ಸೇರಿದಂತೆ ಐದಕ್ಕೂ ಹೆಚ್ಚು ಯೂಟ್ಯೂಬರ್‌ಗಳಿಗೆ ನೋಟಿಸ್ ಹೋಗಿದ್ದು, ಅವರು ಬೆಳ್ತಂಗಡಿ SIT ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. SIT ಅಧಿಕಾರಿಗಳು ಈ ವಿಚಾರಣೆಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು,ಈ ಬಾರಿ ಯಾವೆಲ್ಲಾ ಪ್ರಶ್ನೆಗಳನ್ನು ಕೇಳಬೇಕು ಎಂಬುದರ ಕುರಿತು ಅಧಿಕಾರಿಗಳು ಪೂರ್ವ ಸಿದ್ಧತೆ ನಡೆಸಿದ್ದಾರೆ.
ಈ ಹಿಂದಿನ ತನಿಖೆಯ ಸಂದರ್ಭದಲ್ಲಿ ಆರೋಪಿ ಚಿನ್ನಯ್ಯ ನೀಡಿದ ಹೇಳಿಕೆಗಳನ್ನು ಆಧರಿಸಿ SIT ತನ್ನ ತನಿಖೆಯನ್ನು ಮುಂದುವರಿಸಿದೆ. ಚಿನ್ನಯ್ಯ ನೀಡಿದ ಹೇಳಿಕೆಗಳಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಯೂಟ್ಯೂಬರ್‌ಗಳ ಮೂಲಕ ಮರು ಪರಿಶೀಲನೆ ನಡೆಸುವುದು ಮತ್ತು ಪ್ರಶ್ನೆಗಳನ್ನು ಕೇಳುವ ಉದ್ದೇಶದಿಂದ ಅವರನ್ನು ಕರೆಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ.