ಮುದ್ದೇಬಿಹಾಳ,ಅ.೦೨ ತಾಲೂಕಿನ ಕುಂಚಗನೂರ ಗ್ರಾಮದ ಕೃಷ್ಣಾ ನದಿಯಲ್ಲಿ ಆ.೨೩ರಂದು ಎತ್ತಿಗೆ ಮೈತೊಳೆಯಲು ಹೋದ ಸಂದರ್ಭ ಮೊಸಳೆ ದಾಳಿಗೆ ಬಲಿಯಾಗಿದ್ದ ಕಾಶಪ್ಪ ಕಂಬಳಿ ಕುಟುಂಬಕ್ಕೆ ವಲಯ ಅರಣ್ಯ ಇಲಾಖೆಯ ವಿಜಯಪುರ ವಿಭಾಗದ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ೨೦ ಲಕ್ಷ ರೂ ಎಕ್ಸ-ಗ್ರೇಟಿಯಾ (ಪರಿಹಾರ) ಹಣ ಮಂಜೂರು ಮಾಡಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ತಿಳಿಸಿದ್ದಾರೆ. ಗುರುವಾರ ತಾಲೂಕು ಆಡಳಿತ ಸೌಧ ಎದುರು ಶಾಸಕ ಸಿ.ಎಸ್.ನಾಡಗೌಡ ಅವರ ಮುಖಾಂತರ ಮೃತನ ಪತ್ನಿ ಯಲ್ಲವ್ವಗೆ ಆದೇಶ ಪತ್ರ ಹಸ್ತಾಂತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾಡು ಪ್ರಾಣಿ ದಾಳಿಯಿಂದ ವ್ಯಕ್ತಿ ಮೃತಪಟ್ಟರೆ ಸರ್ಕಾರದ ಆದೇಶದ ಅನ್ವಯ ಮೃತನ ವಾರಸುದಾರರಿಗೆ ಎಕ್ಸ-ಗ್ರೇಟಿಯಾ ಹಣ ಪಾವತಿಸಲು ಅವಕಾಶ ಇದೆ. ಹೀಗಾಗಿ ಮೃತನ ಪತ್ನಿ ಯಲ್ಲವ್ವಗೆ ಎಕ್ಸ-ಗ್ರೇಟಿಯಾ ಹಣ ಪಾವತಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ತಹಶೀಲ್ದಾರ್ ಕೀರ್ತಿ ಚಾಲಕ್, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಅಧಿಕಾರಿಗಳು, ಮುಖಂಡರು ಇದ್ದರು. ಘಟನೆ ನಡೆದ ದಿನ ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿಯವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳಿಗೆ ಮೃತನ ವಾರಸುದಾರರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ಇದಲ್ಲದೆ ಶವ ದೊರೆಯುವತನಕ ಗ್ರಾಮದಲ್ಲೇ ತಮ್ಮ ಆಪ್ತರೊಂದಿಗೆ ಬೀಡು ಬಿಟ್ಟು ಶವ ಪತ್ತೇ ಕಾರ್ಯಾಚರಣೆಯ ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಜಿಲ್ಲಾಧಿಕಾರಿ ಸೇರಿ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳದಿಂದಲೇ ಮೋಬೈಲ್ ಮೂಲಕ ಮಾತನಾಡಿ ಮೊಸಳೆ ದಾಳಿಯಿಂದಲೇ ರೈತ ಸಾವನ್ನಪ್ಪಿದ್ದನ್ನು ಖಚಿತಪಡಿಸಲು ಶ್ರಮಿಸಿದ್ದರು. ಘಟನೆ ನಡೆದ ಎರಡು ದಿನಗಳ ನಂತರ ಶಾಸಕ ಸಿ.ಎಸ್.ನಾಡಗೌಡರು ಮೃತನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ದೊರೆಯುವ ಪರಿಹಾರ ಬಿಡುಗಡೆಗೊಳಿಸುವ ಭರವಸೆ ನೀಡಿದ್ದರು.


