ಧಾರವಾಡ,ಸೆ.೩೦: ಸಪ್ತಾಪುರದ ವಿವೇಕಾನಂದ ಸರ್ಕಲ್ ಬಳಿ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಎಂಬುವವರು” ಸೈನಿಕ ” ಮೆಸ್ ನಡೆಸುತ್ತಿದ್ದಾರೆ. ರಾತ್ರಿ ೧೧ ಗಂಟೆ ಸುಮಾರಿಗೆ ಮೆಸ್ ಓಪನ್ ಮಾಡಿಕೊಂಡು ಊಟ ಮಾಡುತ್ತಿದ್ದು, ಇಷ್ಟೊತ್ತಾದರೂ ಮೆಸ್ ಓಪನ್ ಮಾಡಿರುವುದೇಕೆ? ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಇದರಿಂದ ಮಾಜಿ ಸೈನಿಕ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದು ಕೈಕೈ ಸಹ ಮಿಲಾಯಿಸಿದ್ದಾರೆ. ಈ ವೇಳೆ ಮಾಜಿ ಸೈನಿಕನಿಗೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ನಮಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಾಜಿ ಸೈನಿಕನ ಪತ್ನಿ ಗೀತಾ ಆರೋಪಿಸಿದ್ದಾರೆ. ಈ ಘಟನೆಯಲ್ಲಿ ಮಾಜಿ ಸೈನಿಕ ರಾಮಪ್ಪ ಗಾಯಗೊಂಡು ಇದೀಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಪೊಲೀಸರೇ ರೌಡಿಗಳಂತೆ ವರ್ತನೆ ಮಾಡಿದ್ದಾರೆ ಧಾರವಾಡ ಸಪ್ತಾಪುರದಲ್ಲಿರುವ ಸೈನಿಕ ಮೆಸ್ ಮಾಲೀಕ ರಾಮಪ್ಪ ನಿಪ್ಪಾಣಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಎಎಸ್‌ಐ ವಿದ್ಯಾನಂದ ಸುಬೇದಾರ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ರಾಚಪ್ಪ ಕಣಬೂರ ಎಂಬಾತರನ್ನು ಅಮಾನತ್ತು ಮಾಡುವುದರ ಜೊತೆಗೆ ಅವರ ಮೇಲೆ ಎಫ್‌ಐಆರ್ ಕೂಡ ದಾಖಲಾಗುವಂತೆ ಮಾಡಿದ್ದಾರೆ.
ಈ ಇಬ್ಬರೂ ಪೊಲೀಸ್ ಸಿಬ್ಬಂದಿ ಮೇಲೆ ಎಫ್‌ಐಆರ್ ದಾಖಲಾದ ನಂತರ ಕಾನೂನು ಪ್ರಕಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಇದೀಗ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಇಬ್ಬರನ್ನೂ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಪೊಲೀಸರು ಕೂಡ ಆ ಮಾಜಿ ಸೈನಿಕ ನಿಪ್ಪಾಣಿ ಮೇಲೆ ದೂರು ದಾಖಲಿಸಿದ್ದಾರೆ. ಕರ್ತವ್ಯದ ಮೇಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಆತ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ. ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆ ರೀತಿ ಹಲ್ಲೆ ನಡೆಸಿದ್ದರೆ ಆ ಮಾಜಿ ಸೈನಿಕನ ಮೇಲೂ ಕ್ರಮ ಆಗಲಿದೆ. ಸದ್ಯ ಸಿಸಿಟಿವಿ ಡಿವಿಆರ್ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

