ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಅವರ ಕುಟುಂಬದವರ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಸಂಬಂಧ ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್ ಪ್ರಶ್ನಿಸಿ ಹಾಗೂ ತನಿಖಾಧಿಕಾರಿ ಬದಲಾವಣೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅ.8ಕ್ಕೆೆ ಆದೇಶ ಕಾಯ್ದಿರಿಸಿದೆ.
ಅರ್ಜಿ ಸಂಬಂಧ ಸೋಮವಾರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಅ.8ರಂದು ಅಂತಿಮ ಆದೇಶ ನೀಡುವುದಾಗಿ ತಿಳಿಸಿದೆ. ‘ಮುಡಾದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕುಟುಂಬ ಅಕ್ರಮವಾಗಿ 14 ನಿವೇಶನಗಳನ್ನು ಪಡೆದಿದ್ದಾರೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಸಲ್ಲಿಸಿರುವ ಬಿ ರಿಪೋರ್ಟ್ ತಿರಸ್ಕರಿಸಬೇಕು. ಪ್ರಕರಣದ ತನಿಖಾಧಿಕಾರಿಯಾಗಿರುವ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್, ಸರಿಯಾದ ತನಿಖೆ ಮಾಡದೆ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಹೀಗಾಗಿ ತನಿಖಾಧಿಕಾರಿಯನ್ನು ಬದಲಿಸಬೇಕು’ ಎಂದು ಸ್ನೇಹಮಯಿ ಕೃಷ್ಣ ಅವರು ನ್ಯಾಯಾಲಯಕ್ಕೆೆ ಅರ್ಜಿ ಸಲ್ಲಿಸಿದ್ದರು.
ಈಗಾಗಲೇ ಮುಡಾ ಅಕ್ರಮ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ವಿರುದ್ಧ ಇ.ಡಿ. ಆರಂಭಿಸಿರುವ ಹಣ ವರ್ಗಾವಣೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅದಕ್ಕೂ ಮುನ್ನ ಕರ್ನಾಟಕ ಹೈಕೋರ್ಟ್ ಕೂಡ ಇ.ಡಿ. ಪ್ರಕಣವನ್ನು ರದ್ದು ಮಾಡಿತ್ತು.


