ಅಂಟಾನನರಿವೋ(ಮಡಗಾಸ್ಕರ್): ನೇಪಾಳದ ಬಳಿಕ ಪುಟ್ಟ ದ್ವೀಪ ದೇಶ ಮಡಗಾಸ್ಕರ್ ಜೆನ್ ಝಿ ಪ್ರತಿಭಟನೆಗೆ ನಲುಗಿದ್ದು, ಅಲ್ಲಿನ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಲವೆಡೆ ನಡೆದ ಪ್ರತಿಭಟನೆಗಳಲ್ಲಿ ಇಲ್ಲಿವರೆಗೆ 22 ಜನರು ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಣವೇನು?: ದೇಶದಲ್ಲಿ ಕಳೆದ ಗುರುವಾರದಿಂದ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ವಿದ್ಯುತ್ ಮತ್ತು ನೀರಿನ ಪೂರೈಕೆಯಲ್ಲಾದ ವ್ಯತ್ಯಯಕ್ಕೆ ಆಕ್ರೋಶ ಶುರುವಾಗಿತ್ತು. ಶಾಂತಿಯುತವಾಗಿ ಆರಂಭಗೊಂಡ ಪ್ರತಿಭಟನೆಗಳು ಕ್ರಮೇಣ ಹಿಂಸಾಚಾರಕ್ಕೆ ತಿರುಗಿವೆ. ಸರ್ಕಾರದ ವೈಫಲ್ಯದ ವಿರುದ್ಧ ಯುವಜನತೆ ತೀವ್ರ ಆಕ್ರೋಶ ಹೊರಹಾಕಿದ್ದು, ದೇಶದಲ್ಲಿ ಹೊಸ ಚುನಾವಣೆ ನಡೆಸಲೇಬೇಕೆಂದು ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಪ್ರತಿಭಟನೆಗಳ ಬೆನ್ನಲ್ಲೇ ಅಧ್ಯಕ್ಷ ರಾಜೋಲಿನಾ ಅವರು ಭಾನುವಾರ ಇಂಧನ ಸಚಿವರನ್ನು ವಜಾಗೊಳಿಸಿದ್ದಾರೆ. ಇದೇ ವೇಳೆ, ಅಂಟಾನನರಿವೊಗೆ ಭೇಟಿ ನೀಡಿದ್ದು, ಜನಜೀವನವನ್ನು ರಕ್ಷಿಸುವ ಮತ್ತು ಸುಧಾರಿಸುವ ಕುರಿತು ಭರವಸೆ ನೀಡಿದ್ದಾರೆ.