ಬೆಂಗಳೂರು, ಸೆಪ್ಟೆಂಬರ್ 30: ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷದ ಪಾಲಿಗೆ ದೇವರಂತೆ ಭಾಸವಾಗಿದ್ದ ಕರ್ನಾಟಕ ರಾಜ್ಯದ ಗುತ್ತಿಗೆದಾರರು ಇದೀಗ ಕಾಂಗ್ರೆಸ್ ಸರ್ಕಾರದ ಪಾಲಿಗೆ ಮಗ್ಗುಲ ಮುಳ್ಳಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರ ಮಾತುಗಳಿಗೆಲ್ಲ ತಾನೇ ಮುದ್ರೆ ಒತ್ತಿದ್ದ ಕಾಂಗ್ರೆಸ್ ಇದೀಗ ಅಧಿಕಾರಕ್ಕೆ ಏರಿದ ಬಳಿಕ ಅದೇ ಗುತ್ತಿಗೆದಾರರ ಮಾತುಗಳಿಗೆ ಕಿವಿಯೇ ಕೊಡುತ್ತಿಲ್ಲ. ಹೀಗಂದು ಖುದ್ದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವೇ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಗುತ್ತಿಗೆ ಕಮಿಷನ್ ದುಪ್ಪಟ್ಟಾಗಿದೆ ಎಂದು ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟರ್ ಅಸೋಸಿಯೇಷನ್ ಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದು ಭಾರಿ ಚರ್ಚೆಗೆ ನಾಂದಿ ಹಾಡಿದೆ. ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್, ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಹಾಗೂ ಇತರೆ ಸಮಸ್ಯೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಕಳೆದ ಎರಡೂವರೆ ವರ್ಷಗಳಿಂದ ನಿರಂತರ ಸಭೆಗಳಾಗಿವೆ. ಎರಡು ವರ್ಷಗಳಿಂದ ಸಮಸ್ಯೆ ಹಾಗೂ ಬಾಕಿ ಹಣದ ಪಾವತಿ ಬಗ್ಗೆ ಅನೇಕ ಸುತ್ತಿನ ಸಭೆಗಳು ನಡೆದಿವೆ. ಆದರೆ ಪ್ರತಿ ಬಾರಿ ಗುತ್ತಿಗೆದಾರರನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಮಾಧಾನಪಡಿಸಿ ವಾಪಸ್ ಕಳುಹಿಸುವುದನ್ನು ಬಿಟ್ಟರೆ ಬೇರೆ ಪ್ರಯೋಜನವೇ ಆಗುತ್ತಿಲ್ಲ. ಹೀಗೆಂದು ಪತ್ರದಲ್ಲಿ ಉಲ್ಲೇಖ ಮಾಡಿರುವ ಗುತ್ತಿಗೆದಾರರು, ಇದುವರೆಗೆ ನಿಮ್ಮ ಸರ್ಕಾರದಿಂದ ಯಾವುದೇ ಪ್ರಯೋಜನ ನಮಗೆ ಆಗಿಲ್ಲ ಎಂದು ಕೆಂಡ ಕಾರಿದ್ದಾರೆ.


