ಚೆನ್ನೈ, ಸೆಪ್ಟೆಂಬರ್ 29: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ ವಿಜಯ್ ಅವರಿಗೆ ಭಾನುವಾರ ಬಾಂಬ್ ಬೆದರಿಕೆ ಬಂದಿದೆ. ಶನಿವಾರ ಟಿವಿಕೆ ರ್ಯಾಲಿ ವೇಳೆ ಕಾಲ್ತುಳಿತ ಉಂಟಾಗಿ 40 ಜನರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ವಿಜಯ್ ಅವರಿಗೆ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಚೆನ್ನೈನಲ್ಲಿರುವ ಅವರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ.
ಕರೂರ್ನಲ್ಲಿ ನಡೆದ ಅವರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 10 ಮಕ್ಕಳು, 17 ಮಹಿಳೆಯರು ಮತ್ತು 13 ಪುರುಷರು ಸೇರಿದಂತೆ 40 ಜನರು ಸಾವನ್ನಪ್ಪಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಈ ಘಟನೆಯ ನಂತರ, ನಟ-ರಾಜಕಾರಣಿ ವಿಜಯ್ ಪ್ರತಿಕ್ರಿಯೆ ನೀಡಿದ್ದು, ಈ ಘಟನೆಯಿಂದ ನನ್ನ ಹೃದಯ ಛಿದ್ರಗೊಂಡಿದೆ ಎಂದು ಹೇಳಿದ್ದರು. ಎಕ್ಸ್ (ಹಿಂದೆ ಟ್ವಿಟರ್) ಪೋಸ್ಟ್ನಲ್ಲಿ 51 ವರ್ಷದ ವಿಜಯ್ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸಿದ್ದರು ಮತ್ತು ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದ್ದರು. ಆದರೆ, ಇದುವರೆಗೂ ಅವರು ಆಸ್ಪತ್ರೆಗೆ ಭೇಟಿ ನೀಡಿಲ್ಲ, ಮೃತರ ಕುಟುಂಬಸ್ಥರನ್ನೂ ಭೇಟಿಯಾಗಿಲ್ಲ.


