ಬಳ್ಳಾರಿ,ಸೆ.25.ಪರಿಶಿಷ್ಟ ಪಂಗಡಕ್ಕೆ ಕುರುಬ ಸಮಾಜವನ್ನು ಸೇರಿಸುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸೆ.೨೫ರಂದು (ಇಂದು) ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಯಶಸ್ವಿಗೊಳಿಸಬೇಕೆಂದು ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷ ಜೋಳದರಾಶಿ ತಿಮ್ಮಪ್ಪ ಗುಡುಗಿದರು.
ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬಲಿಷ್ಠವಾದ ಕುರುಬ ಮತ್ತು ಇತರೇ ಸಮುದಾಯಗಳನ್ನು ಎಸ್‌ಟಿಗೆ ಸೇರಿಸುವುದನ್ನು ವಿರೋಧಿಸಿ, ನಗರದ ಡಾ||ರಾಜ್‌ಕುಮಾರ್ ರಸ್ತೆ ಪ್ರದೇಶದ ಕಾಗೆ ಪಾರ್ಕ್ ಮುಂಭಾಗದಲ್ಲಿ ಇಂದು (ಸೆ.೨೫) ಬೆಳಿಗ್ಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿ, ಅಲ್ಲಿಂದ ಪ್ರಾರಂಭವಾಗುವ ಬೃಹತ್ ಪ್ರತಿಭಟನಾ ಮೆರವಣಿಗೆ ಡಾ||ರಾಜ್‌ಕುಮಾರ್ ರಸ್ತೆ, ಗಡಿಗಿ ಚನ್ನಪ್ಪ ವೃತ್ತ, ರೈಲ್ವೇ ಸ್ಟೇಷನ್ ರಸ್ತೆ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಿ ಅಲ್ಲಿ ಕೆಲ ಕಾಲ ಪ್ರತಿಭಟನಾ ಧರಣಿ ನಡೆಸಿ, ನಂತರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದರು.
ವಾಲ್ಮೀಕಿ ಗುರುಪೀಠದ ಶ್ರೀಗಳ ಆದೇಶದ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ, ಹೋಬಳಿ ಕೇಂದ್ರಗಳಲ್ಲಿ ವಾಲ್ಮೀಕಿ ಸಮುದಾಯದವರು ಪ್ರತಿಭಟನೆ ನಡೆಸಿ, ಎಸ್.ಟಿ.ಗೆ ಅನ್ಯ ಸಮುದಾಯದವರನ್ನು ಸೇರಿಸುವುದನ್ನು ವಿರೋಧಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಿದ್ದೇವೆ.
ಪ್ರತಿಭಟನೆಯ ನಂತರ ವಾಲ್ಮೀಕಿ ಗುರುಪೀಠದ ಶ್ರೀಗಳ ಜೊತೆಯಲ್ಲಿ ಚರ್ಚಿಸಿ, ಪರಿಶಿಷ್ಟ ಪಂಗಡ (ಎಸ್.ಟಿ) ಮೀಸಲಾತಿಯಲ್ಲಿ ಗೆದ್ದಿರುವ ೧೫ ಜನ ಶಾಸಕರು, ಇಬ್ಬರು ಸಂಸದರು, ವಿಧಾನಪರಿಷತ್‌ನ ಮೂವರು ಸದಸ್ಯರು ಹಾಗೂ ಸಾಮಾನ್ಯ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾಗಿರುವ ಪ್ರಿಯಾಂಕ ಜಾರಕಿಹೊಳಿ ಅವರು ಎಸ್.ಟಿ.ಗೆ ಬಲಿಷ್ಠ ಸಮುದಾಯಗಳನ್ನು ಸೇರಿಸುವ ಬಗ್ಗೆ ಚಕಾರವೆತ್ತುತ್ತಿಲ್ಲ. ಏಕೆಂದರೆ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಇತರೇ ಸಮುದಾಯದವರು ತಮಗೆ ಎಲ್ಲಿ ಮತ ನೀಡದೇ ಇರಬಹುದು ಎಂಬ ಆತಂಕದಿAದ ಅವರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಗುಡುಗಿದರು.
ಈ ಎಲ್ಲಾ ವಿಷಯಗಳ ಬಗ್ಗೆ ವಾಲ್ಮೀಕಿ ಗುರುಪೀಠದ ಶ್ರೀಗಳೊಂದಿಗೆ ಸಮಗ್ರವಾಗಿ ಚರ್ಚಿಸಿ, ಪರಿಶಿಷ್ಟ ಪಂಗಡದ ಮೀಸಲಾತಿಯಲ್ಲಿ ಗೆದ್ದಂತಹ ಶಾಸಕರ, ಸಂಸದರ ನಿವಾಸಗಳ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ಸಮಾಜವನ್ನು ತುಳಿಯುವ ಹುನ್ನಾರ ನಡಿತಾ ಇದೆ. ರಾಜ್ಯದ ವಾಲ್ಮೀಕಿ ಸಮುದಾಯದ ಶಾಸಕರು ಸಂಸದರು ಜನಪ್ರತಿನಿಧಿಗಳು ಸಮಾಜದ ಪರ ಕೆಲಸ ಮಾಡಬೇಕು. ಈ ಮೀಸಲಾತಿಯಿಂದಲೇ ಶಾಸಕರು ಸಂಸದರು ಆಗಿದ್ದು ಹೊರತು ಸರ್ಕಾರದಿಂದಲ್ಲ, ಸಮುದಾಯದ ಪರ ನಾಯಕರು ಧ್ವನಿ ಎತ್ತಬೇಕು. ನಮ್ಮ ಸಮಾಜದಲ್ಲಿ ಜನ ಪ್ರತಿನಿಧಿಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತದೆ ಸಮಾಜದ ಬಗ್ಗೆ ಕಾಳಜಿಯೂ ಇಲ್ಲ ಸಮಾಜದ ನಾಯಕರಿಗೆ ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದಾರೆ ಸಮಾಜದ ಜನಪ್ರತಿನಿಧಿಗಳು ಸಮಾಜದ ಪರ ಧ್ವನಿ ಎತ್ತದಿರುವುದು ದುರಂತವಾಗಿದೆ. ದೆಹಲಿಗೆ ತೆರಳಿ ಕುಲಶಾಸ್ತ್ರ ಅಧ್ಯಯನ ವಿಭಾಗಕ್ಕೆ ದಾಖಲೆಗಳನ್ನು ಶ್ರೀಗಳ ನೇತೃತ್ವದಲ್ಲಿ ಸಲ್ಲಿಸಲು ಹೊರಡಲು ಸಿದ್ದರಿದ್ದೇವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ಕಾನೂನು ಸಲಹೆಗಾರರಾದ ಜಯರಾಮ ಮಾತನಾಡಿ, ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಸತ್ಯನಾರಾಯಣ, ರಾಜ್ಯ ಉಪಾಧ್ಯಕ್ಷ ಪರಮದೇವನಹಳ್ಳಿ ಜನಾರ್ದನ ನಾಯಕ, ಜಿಲ್ಲಾಧ್ಯಕ್ಷ ರ‍್ರಗುಡಿ ಮುದಿಮಲ್ಲಯ್ಯ, ಮುಖಂಡರುಗಳಾದ ರೂಪನಗುಡಿ ಗೋವಿಂ ದಪ್ಪ, ಬಿ.ರುದ್ರಪ್ಪ, ಎನ್.ದುರುಗಪ್ಪ, ಗೋವಿಂದಪ್ಪ ಸಿಂಧಿಗೇರಿ, ದೇವಿನಗರ ಜಯರಾಮ್, ಕಾಯಿಪಲ್ಲೆ ಬಸವರಾಜ್, ಎ.ಪುಷ್ಪ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಇದ್ದರು.