ಬೆಳಗಾವಿ : ರಾಣಿ ಚನ್ನಮ್ಮಳ ಧೈರ್ಯ, ತ್ಯಾಗ ಹಾಗೂ ಅಜೇಯ ಮನೋಭಾವನೆಯನ್ನು ಯುವಪೀಳಿಗೆ ಅವಳವಡಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಸಿ.ಎಂ.ತ್ಯಾಗರಾಜ್ ಅವರು ತಿಳಿಸಿದರು.
ಇಲ್ಲಿನ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಮತ್ತು ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಅವರ ಐತಿಹಾಸಿಕ ವಿಜಯದ 200ನೇ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಣಿ ಚನ್ನಮ್ಮಳ ಎಂಬ ಹೆಸರು ಪ್ರೇರಣೆಯ ಸಂಕೇತ. ಬಲಿಷ್ಠ ಬ್ರಿಟಿಷ್ ಸೈನ್ಯವನ್ನೇ ಸೋಲಿಸಿದ, ಮಹಾನ್ ವ್ಯಕ್ತಿತ್ವ ರಾಣಿ ಚನ್ನಮ್ಮ ಅವರದ್ದು. ಪ್ರಸ್ತುತ ಯುವ ಪೀಳಿಗೆ ಚನ್ನಮ್ಮಳ ಚಿಂತನೆಗಳು ಯುವಪೀಳಿಗೆಗೆ ಮಾರ್ಗದರ್ಶನವಾಗಿವೆ ಎಂದರು.
ಯುವ ಶಕ್ತಿಯು ದೇಶದ ಅಭಿವೃದ್ಧಿಯನ್ನು ನಿರ್ಧರಿಸಲಿದೆ. ಆದ್ದರಿಂದ ರಾಷ್ಟ್ರ ಪ್ರಗತಿಗೆ ಯುವಕ, ಯುವತಿಯರು ಕೈ ಜೋಡಿಸಬೇಕು. ಅಲ್ಲದೇ ಯುವ ಪೀಳಿಗೆಯು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಸಮಾಜಸೇವೆಗೆ ಅರ್ಪಿಸಿದಾಗ ಮಾತ್ರ ಸದೃಢ ದೇಶ ನಿರ್ಮಾಣವಾಗಲು ಸಾಧ್ಯ ಎಂದು ರಾಚವಿ ಕುಲಪತಿ ಪ್ರೋ. ಸಿ.ಎಂ.ತ್ಯಾಗರಾಜ್ ಅವರು ಕರೆ ನೀಡಿದರು.
ಬಳಿಕ ಪ್ರೋ.ರಾಜಪ್ಪ ದಳವಾಯಿ ಅವರು ಮಾತನಾಡಿ, ರಾಣಿ ಚನ್ನಮ್ಮ ಶ್ರೇಷ್ಠತೆ ಮತ್ತು ಪ್ರೇರಣೆಯ ಶಾಶ್ವತ ಚಿಹ್ನೆ. ಬ್ರಿಟಿಷರ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟವು ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣವಾಯಿತು. ಚನ್ನಮ್ಮಳ ಧೈರ್ಯವು ಅಸಂಖ್ಯಾತ ಭಾರತೀಯರಿಗೆ ಹೋರಾಟದ ಪ್ರೇರಣೆಯಾಗಿತ್ತು ಎಂದರು.
ಖಾನಾಪುರದ ಎಂ.ಎಂ.ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ, ಲೇಖಕಿ ಡಾ.ವಿಜಯಲಕ್ಷ್ಮೀ ತಿರ್ಲಾಪುರ ಸಂಪನ್ಮೂಲ ವ್ಯಕ್ತಿಯಾಗಿ ರಾಣಿ ಚನ್ನಮ್ಮಳ ಜೀವನ ಚರಿತ್ರೆ, ಹೋರಾಟಗಳ ಕುರಿತು ಮಾತನಾಡಿದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಪ್ರಭಾವತಿ ಫಕೀಪೂರ ಅವರು ಮಾತನಾಡಿ, ಐತಿಹಾಸಿಕ ಹಿನ್ನಲೆಯುಳ್ಳ ಕಿತ್ತೂರನ್ನು ಸಾಂಸ್ಕೃತಿಕ ಮತ್ತು ಪ್ರವಾಸಿ ಕೇಂದ್ರವನ್ನಾಗಿ ಬದಲಾಗಿಸಲು ರೂಪಿಸಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಈ ವೇಳೆ ರಾಚವಿ ಕುಲಸಚಿವರು ಸಂತೋಷ ಕಾಮಗೌಡ, ಹಣಕಾಸು ಅಧಿಕಾರಿ ಸಪ್ನಾ ಎಂ.ಎ., ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಸುಂದರ ಬಾಸ್ಕರ್, ಸಿಂಡಿಕೇಟ್ ಸದಸ್ಯ ಡಾ.ಮಹಾಂತೇಶ ಕಂಬಾರ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕ ಡಾ.ಹನುಮಂತಪ್ಪ ಡಿ.ಜಿ. ಸ್ವಾಗತಿಸಿದರು. ಅಧ್ಯಯನ ಪೀಠದ ನಿರ್ದೇಶಕಿ ಪ್ರೊ.ನಾಗರತ್ನಾ ಪರಾಂಡೆ ಪರಿಚಯಿಸಿದರು. ಸಮೃದ್ಧಿ.ಬರ್ವೆ ನಿರೂಪಿಸಿದರು. ಗೋಪಿಕಾ.ಕುಲಕರ್ಣಿ ವಂದಿಸಿದರು.


