ಮುದ್ದೇಬಿಹಾಳ: ಸ್ವಚ್ಛತಾ ಕಾರ್ಯ ನಿರ್ವಹಿಸಿ ಜನರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವ ಪೌರಕಾರ್ಮಿಕರು ನಡೆದಾಡುವ ದೇವರಿದ್ದಂತೆ. ಪೌರಕಾರ್ಮಿಕರು ಇಲ್ಲದೆ ಹೋದಲ್ಲಿ ಅಥವಾ ಒಂದು ವಾರ ಧರಣಿ ಹೂಡಿದರೆ ನಗರಗಳ ಪರಿಸ್ಥಿತಿ ಹೇಗಿರುತ್ತದೆ ಅನ್ನೋದನ್ನು ಊಹಿಸುವುದೂ ಕಷ್ಟಕರ ಎಂದು ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.
ಇಲ್ಲಿನ ಎಪಿಎಂಸಿಯಲ್ಲಿರುವ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೌರಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಗುಡಿಯಲ್ಲಿರುವ ದೇವರು ದೇವರಲ್ಲ. ಆದರೆ ನಮ್ಮೆಲ್ಲರ ನಡುವೆ ಇದ್ದು ಎಲ್ಲ ರೀತಿಯ ಕೊಳೆ, ಕೊಳಚೆ, ಕಸ ತೆಗೆದು ಸ್ವಚ್ಛಗೊಳಿಸಿ ನಮ್ಮನ್ನು ಸುಂದರ ಪರಿಸರದಲ್ಲಿ ಓಡಾಡುವಂತೆ ನೋಡಿಕೊಳ್ಳುವ ಪೌರಕಾರ್ಮಿರೇ ನಮ್ಮೆಲ್ಲರ ಪಾಲಿಗೆ ದೇವರಿದ್ದಂತೆ. ಪ್ರತಿಯೊಬ್ಬ ನಾಗರಿಕ ಕಸ ವಿಂಗಡಿಸಿ ಕಸದ ಗಾಡಿಗೆ ಹಾಕಿದರೆ ಅದು ನಾಗರಿಕರ ಕರ್ತವ್ಯ ನಿರ್ವಹಿಸಿದಂತಾಗುತ್ತದೆ. ಪೌರಕಾರ್ಮಿಕರು ಶಿಸ್ತುಬದ್ದವಾಗಿ ಕೆಲಸ ಮಾಡಿದರೂ ಮುನ್ಸಿಪಾಲ್ಟಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ಆರೋಪ ಜನರಿಂದ ಕೇಳಿಬರುತ್ತದೆ. ಜನರು ಕೂಡ ತಮ್ಮ ಕರ್ತವ್ಯ ಅರ್ಥಮಾಡಿಕೊಂಡು ಮುನ್ನಡೆಯಬೇಕು. ಪೌರಕಾರ್ಮಿಕರು, ಪುರಸಭೆ ವಿರುದ್ಧ ಆರೋಪಿಸುವುದಕ್ಕೂ ಮುನ್ನ ನಾಗರಿಕರಾದ ನಮ್ಮ ಕರ್ತವ್ಯಗಳೇನು ಅನ್ನೋದನ್ನು ತಿಳಿದುಕೊಳ್ಳಬೇಕು ಎಂದರು.
ಪೌರಕಾರ್ಮಿಕರಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಕೊಡುತ್ತಿದೆ. ಅವರ ಆರೋಗ್ಯಕ್ಕಾಗಿ ಹಲವಾರು ಯೋಜನೆ ಜಾರಿಗೊಳಿಸಿದೆ. ಸರ್ಕಾರಿ ಆಸ್ಪತ್ರೆಗಳು ಅಥವಾ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳು ಉಚಿತ ಸೌಲಭ್ಯ ಕೊಡುತ್ತಿವೆ. ಸದಾ ಜನರ ಆರೋಗ್ಯದ ಕಾಳಜಿ ವಹಿಸುವ ಪೌರಕಾರ್ಮಿಕರ ಆರೋಗ್ಯದ ಬಗ್ಗೆಯೂ ಪ್ರತಿಯೊಬ್ಬರೂ ಚಿಂತಿಸಬೇಕಾಗುತ್ತದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರು ಮಾತನಾಡಿ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಪೌರಕಾರ್ಮಿಕರಿಗೆ ಹಲವಾರು ಸೌಲಭ್ಯ ಘೋಷಿಸಲಾಗಿದೆ. ಶಾಸಕರ ವಿಶೇಷ ಕಾಳಜಿ ಮೇರೆಗೆ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಲೂ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ ರೂಪಿಸಲಾಗಿದೆ. ಒಬ್ಬರಿಗೆ ಏಳೂವರೆ ಲಕ್ಷ ರೂ ಮೌಲ್ಯದ ಮನೆ ಕಟ್ಟಿಸಿಕೊಡಲು ಅವಕಾಶವಿದೆ. ಪೌರಕಾರ್ಮಿಕರಿಗೆ ಜೀವ ವಿಮೆಯನ್ನೂ ಮಾಡಿಸಲಾಗಿದೆ. ವರ್ಷಕ್ಕೆ ಎರಡು ಬಾರಿ ವಿಶೇಷ ಸೌಲಭ್ಯ ಕೊಡಲಾಗುತ್ತಿದೆ ಎಂದರು.
ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ ಅವರು ಮಾತನಾಡಿ ಇದೊಂದು ಅಮೃತ ಘಳಿಗೆ ಇದ್ದಂತೆ. ವಿಶೇಷ ಸೇವೆ ಸಲ್ಲಿಸಿದವರನ್ನು ಈ ದಿನದಂದು ಸನ್ಮಾನಿಸುವುದು ಹಬ್ಬದ ಕಳೆ ತಂದುಕೊಡುವಂಥದ್ದು. ಪೌರಕಾರ್ಮಿಕರು ನಮ್ಮ ನಾಗರಿಕರ ಸೇವೆ ಮಾಡುವ ಸ್ವಚ್ಛತಾ ಸೈನಿಕರಿದ್ದಂತೆ. ಹಬ್ಬ ಹರಿದಿನಗಳಂದು ತಮ್ಮ ಮನೆಯ ಕೆಲಸ ಬಿಟ್ಟು ಜನರ ಕೆಲಸ ಮಾಡುವಂಥವರು. ಕೊರೊನಾದಲ್ಲಿ ಇವರ ಸೇವೆ ಅತ್ಯಮೂಲ್ಯವಾದದ್ದಾಗಿತ್ತು ಎಂದರು.
ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಮೆಹಮ್ಮೂದ್ ಫಸಿಯುದ್ದೀನ್, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ ಕಟ್ಟಿಮನಿ, ಉಪಾಧ್ಯಕ್ಷ ರಾಮು ಹಂಗರಗಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾನಪ್ಪ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಸಂತಿ ಮಠ, ಪುರಸಭೆ ಆರೋಗ್ಯ ವಿಭಾಗದ ಜಾವೀದ ನಾಯ್ಕೋಡಿ, ತಾಲೂಕು ಆರೋಗ್ಯ ಕ್ಷೇತ್ರಶಿಕ್ಷಣಾಧಿಕಾರಿ ಅನುಸೂಯಾ ತೇರದಾಳ, ಪುರಸಭೆ ಕಂದಾಯ ಅಧಿಕಾರಿಣಿ ಎನ್.ಎಸ್.ಪಾಟೀಲ, ಪುರಸಭೆ ಸದಸ್ಯರು ವೇದಿಕೆಯಲ್ಲಿದ್ದರು. ಶಿಕ್ಷಕ ಟಿ.ಡಿ.ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.
ಇದೇ ವೇಳೆ ಎಲ್ಲ ೪೯ ಪೌರಕಾರ್ಮಿಕರಿಗೆ ತಲಾ ೭ ಸಾವಿರ ರೂ ಮೊತ್ತದ ಸಹಾಯಧನದ ಚಕ್ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪೌರಕಾರ್ಮಿಕರು ಪುರಸಭೆಯಿಂದ ಬಸವೇಶ್ವರ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಕಾರ್ಯಕ್ರಮ ಸ್ಥಳದವರೆಗೂ ಜಾಥಾ ನಡೆಸಿ ಪೌರಕಾರ್ಮಿಕರ ಸೇವೆಯ ಕುರಿತು ಜನಜಾಗೃತಿ ಮೂಡಿಸಿದರು.


