ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ವತಿಯಿಂದ ಅಭಿನಂದನಾ ಸಮಾರಂಭ

Ravi Talawar
ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ವತಿಯಿಂದ ಅಭಿನಂದನಾ ಸಮಾರಂಭ
WhatsApp Group Join Now
Telegram Group Join Now
 ಸಾಧ‌ಕರನ್ನು ಗುರುತಿಸಿ ಸನ್ಮಾನಿಸುವುದೇ ದೊಡ್ಡ ಸಾಧನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಮೈಸೂರು: ಸಾಧಕರ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸುವುದೇ ನಿಜವಾದ ದೊಡ್ಡ ಸಾಧನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕೃಷ್ಣಮೂರ್ತಿಪುರಂನಲ್ಲಿರುವ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ ಹಾಗೂ ಹೋಟೆಲ್ ಮಾಲೀಕರ ಸಂಘ ಹಾಗೂ ಹೋಟೆಲ್ ಮಾಲೀಕರ ಧರ್ಮದತ್ತಿ ಸಹಯೋಗದೊಂದಿಗೆ ಮಹಿಳಾ ಹೋಟೆಲ್ ಉದ್ಯಮಿಗಳು ಹಾಗೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಶ್ರಮಿಕರನ್ನು  ಅಭಿನಂದಿಸಿ ಮಾತನಾಡಿದ ಸಚಿವರು, ಸಮಾಜದಲ್ಲಿ ಸಾಧಕರನ್ನು ಗುರುತಿಸುವ ಕೆಲಸ ಆಗಬೇಕಿದೆ ಎಂದರು.
ಇವತ್ತಿನ ದಿನಗಳಲ್ಲಿ ಹೋಟೆಲ್ ಉದ್ಯಮ ಎಂಬುದು ತಮಾಷೆ ಅಲ್ಲ.  ಎಲ್ಲಾ ವರ್ಗದವರನ್ನು ಅತಿಥಿ ದೇವೋಭವ ಅಂತ ಸೇವೆ ಮಾಡುವುದೇ ಹೋಟೆಲ್ ಉದ್ಯಮದ ಕೆಲಸ. ಮೈಸೂರಿನ ಹೋಟೆಲ್ ಉದ್ಯಮಿಗಳು, ಸಹಕಾರ ಬ್ಯಾಂಕ್ ಸ್ಥಾಪಿಸುವ ಮೂಲಕ ಎಲ್ಲರಿಗೂ ಆಶ್ರಯ ನೀಡುತ್ತಿದ್ದಾರೆ ಎಂದು ಹೇಳಿದರು.
ನಾನು ಕೂಡ ಬೆಳಗಾವಿಯಲ್ಲಿ  ಹೋಟೆಲ್‌ ಹೊಂದಿರುವೆ, ಎರಡು ಸಕ್ಕರೆ ಕಾರ್ಖಾನೆಯನ್ನು ಹೊಂದಿರುವೆ, ಹೀಗಾಗಿ ಹೋಟೆಲ್ ಉದ್ಯಮದ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡಿರುವೆ ಎಂದರು.
ಸಂಘಟನೆ, ಸಂಘ- ಸಂಸ್ಥೆಗಳನ್ನು ಕಟ್ಟುವುದು ತಮಾಷೆಯ ಮಾತಲ್ಲ. ಹಸಿದವರಿಗೆ ಅನ್ನ ಹಾಕುವ ಮೂಲಕ ಸಾಮಾಜಿಕ ಕಾರ್ಯಕ್ರಮವನ್ನು ಹೋಟೆಲ್ ಉದ್ಯಮದವರು ಮಾಡುತ್ತಿದ್ದಾರೆ. 25 ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದು ಈ ಸೊಸೈಟಿಗೆ ಅಡಿಗಲ್ಲು ಹಾಕಿದ್ದರು. ಅವರೇ ಬೆಳ್ಳಿ ಹಬ್ಬದ ಸಮಾರಂಭವನ್ನು ಉದ್ಘಾಟನೆ ಮಾಡಿದ್ದಾರೆ. ಇದು ನಿಜಕ್ಕೂ ಸೊಸೈಟಿಯ ದೊಡ್ಡ ಸಾಧನೆ. ಈ ಹೋಟೆಲ್ ಸೊಸೈಟಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಇವತ್ತು ಕರಾವಳಿ ಭಾಗದ ಉದ್ಯಮಿಗಳು ಅದರಲ್ಲೂ ಹೋಟೆಲ್ ಉದ್ಯಮಿಗಳು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಒಂದೊಂದು ಕೋಟಿ ರೂ. ದೇಣಿಗೆ ನೀಡುತ್ತಾರೆ. ಇದು ಅವರ ಧನ್ಯತೆಯನ್ನು ತೋರುತ್ತದೆ‌ ಎಂದರು.
ವಿವಿಧ ಸ್ತರದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಅದರಲ್ಲೂ ನರ್ಸ್ ಗಳ ಸೇವೆ ನಿಜಕ್ಕೂ ಶ್ಲಾಘನೀಯ, ನಾನು ಅಪಘಾತದಿಂದ ಆಸ್ಪತ್ರೆಯಲ್ಲಿದ್ದಾಗ ನರ್ಸ್ ಗಳೇ ನನಗೆ ಧೈರ್ಯ ತುಂಬಿದರು ಎಂದು ಹೇಳಿದರು.
ಈ ವೇಳೆ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾರಾಯಣ ವಿ ಹೆಗಡೆ, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ಸಿ, ರವಿ ಶಾಸ್ತ್ರಿ, ಆನಂದ್ ಎಂ.ಶೆಟ್ಟಿ, ಸುಮಿತ್ರ ಎ ತಂತ್ರಿ ಸೇರಿದಂತೆ ಹಲವರು  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article