ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆ ಸರಣಿ ಮುಂದುವರೆದಿದ್ದು, ಇದೀಗ ದೇವಸ್ಥಾನಗಳಲ್ಲೂ ದರ ಏರಿಕೆಗೆ ಸರ್ಕಾರ ತೀರ್ಮಾನಿಸಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 14 ಅಧಿಸೂಚಿತ ದೇವಾಲಯಗಳ ಸೇವಾ ದರಗಳನ್ನು ಪರಿಷ್ಕರಿಸಲಾಗಿದೆ.
ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆ ಟಿಪ್ಪಣಿ ಹೊರಡಿಸಿದೆ. ಅದರಂತೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002ರ ನಿಯಮ 33(2)(vi) ರನ್ವಯ ವ್ಯವಸ್ಥಾಪನಾ ಸಮಿತಿಯವರು ಸಂಸ್ಥೆಯಲ್ಲಿ ನೀಡಲಾಗುವ ಸೇವೆಗಳಿಗೆ ಸೇವಾ ಶುಲ್ಕವನ್ನು ನಿಗದಿಪಡಿಸಬೇಕು. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ 205 ಪ್ರವರ್ಗ ‘ಎ’, 193 ಪ್ರವರ್ಗ ‘ಬಿ’ ಮತ್ತು 34168 ಪ್ರವರ್ಗ ‘ಸಿ’ ಸೇರಿ ಒಟ್ಟು 34566 ಅಧಿಸೂಚಿತ ದೇವಾಲಯಗಳ ಪೈಕಿ ಪ್ರಸಕ್ತ ಸಾಲಿನಲ್ಲಿ 14 ದೇವಾಲಯಗಳಿಗೆ ಸುಮಾರು 7ರಿಂದ 15 ವರ್ಷಗಳಿಗಿಂತ ಹಿಂದೆ ನಿಗದಿಪಡಿಸಿರುವ ಸೇವಾ ದರಗಳನ್ನು ಪರಿಷ್ಕರಿಸಲಾಗಿದೆ ಎಂದು ದತ್ತಿ ಇಲಾಖೆ ತಿಳಿಸಿದೆ.