ರಾಮದುರ್ಗ: ಕ್ಯಾನ್ಸರ್ ಕಾಯಿಲೆ ಮಾರಕವಾಗಿದ್ದರೂ ಭಯ ಪಡುವ ಅಗತ್ಯವಿಲ್ಲ. ವೈದ್ಯಕೀಯ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಹಾಗೂ ಔಷಧಿಗಳ ಅವಿಸ್ಕಾರದಿಂದ ಪ್ರಾರಂಭಿಕ ಹಂತದಲ್ಲಿ ಕಾನ್ಸರ್ ಪತ್ತೆಯಾದರೆ ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ. ಆದರೆ ಆತ್ಮಸ್ಥೈರ್ಯ ಅಗತ್ಯ ಎಂದು ಸ್ತ್ರೀರೋಗ ತಜ್ಞೆ ಡಾ. ಶಿವಲೀಲಾ ಕಂಬಿ ಹೇಳಿದರು.
ಸ್ಥಳೀಯ ತಾ.ಪಂ ಸಭಾಭವನದಲ್ಲಿ ಲಯನ್ಸ್ ಸಂಸ್ಥೆಯಿಂದ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಂಡ ಕಾನ್ಸರ್ ಕಾಯಿಲೆ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ಆಧುನಿಕ ಜೀವನ ಶೈಲಿಯಿಂದ ಅನೇಕ ಮಾರಕ ರೋಗಗಳು ನಮ್ಮನ್ನು ಬೆನ್ನತ್ತುತ್ತಿವೆ. ಹಾಗಾಗಿ ಜೀವನ ಶೈಲಿಯಲ್ಲಿ ಹಾಗೂ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡರೆ ಮಾತ್ರ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ ಎಂದು ಹೇಳಿದರು.
ಕ್ಯಾನ್ಸರ್ ಪ್ರಮಾಣ ಪುರುಷರಗಿಂತ ಮಹಿಳೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಮಹಿಳೆಯಲ್ಲಿ ಹೆಚ್ಚಾಗಿ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ರೋಗ ಬರದಂತೆ ಜಾಗೃತಿ ವಹಿಸುವುದೇ ದೀವ್ಯ ಔಷಧಿಯಾಗಿದೆ. ಯಾವುದೇ ಮಾರಕ ಕಾಯಿಲೆ ಬಂದರೆ ದೃತಿಗೆಡದೇ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಆತ್ಮಸ್ಥೈರ್ಯವಿದ್ದರೆ ಶೇ. ೫೦ ರಷ್ಟು ರೋಗ ಗುಣಪಡಿಸಬಹುದು ಎಂದು ಅವರು ತಿಳುವಳಿಕೆ ನೀಡಿದರು.
ಪ್ರತಿನಿತ್ಯ ದೈಹಿಕ ವ್ಯಾಯಾಮ, ಯಥೇಚ್ಚವಾಗಿ ಹಸಿರು ತರಕಾರಿ, ಮೊಳಕೆಯುಕ್ತ ಕಾಳುಗಳು, ದೇಹಕ್ಕೆ ಅಗತ್ಯ ಇರುವ ಪೋಶಕಾಂಶ ಆಹಾರವನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಂಡರೆ ಮಾತ್ರ ಆರೋಗ್ಯವಾಗಿರಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಲಯನ್ಸ್ ಸಂಸ್ಥೆಯ ರಂಜನಾ ದಿಂಡವಾರ, ಡಾ. ವೈಶಾಲಿ ಸಂಕನಗೌಡ್ರ, ಸರಕಾರಿ ವಸತಿ ನಿಲಯದ ಮೇಲ್ವಿಚಾರಕಿ ಶಾರದಾ ತೋಳಗಟ್ಟಿ, ವಿದ್ಯಾ ಅಕ್ಕಿಮರಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಸರಳಾ ಪತ್ತೇಪೂರ ಸ್ವಾಗತಿಸಿದರು. ವೀಣಾ ಹಿರೇರಡ್ಡಿ ನಿರೂಪಿಸಿದರು. ಸೌಭಾಗ್ಯ ಹೊಂಗಲ್ ವಂದಿಸಿದರು.
ಕ್ಯಾನ್ಸರ್ ಕಾಯಿಲೆ ಮಾರಕವಾಗಿದ್ದರೂ ಭಯ ಪಡುವ ಅಗತ್ಯವಿಲ್ಲ : ಡಾ. ಶಿವಲೀಲಾ ಕಂಬಿ
