♦ ಶಿ.ಗು.ಕುಸುಗಲ್ಲ, ಸಾಹಿತಿಗಳು-ಬೆಳಗಾವಿ
ನಮ್ಮ ಸುಖ ನೆಮ್ಮದಿ ಮುಖ್ಯ, ನೆರೆಯವರ ದು:ಖ ದುಮ್ಮಾನ ನಮಗೇನು ಸಂಬಂಧವಿಲ್ಲ ಎಂಬ ಸ್ವಾರ್ಥ ಮನೋಭಾವ ಹೆಚ್ಚಿನವರಲ್ಲಿ ಗೂಡುಕಟ್ಟುತ್ತಿದೆ. ತಾನು ಎಲ್ಲರಿಗೂ ಎಲ್ಲರೂ ತನಗಾಗಿ ಎಂಬ ವಿಶಾಲ ಮನೊಭಾವನೆ ಇಂದು ನಶಿಸಿಹೋಗಿದೆ. ಜನರ ಅಳಲು, ಅಳುವು, ನೋವು ಅರಿಯದ, ಸಹಕಾರ ನೀಡದ, ಕಲ್ಲು ಮನಸ್ಸಿನವರು ಎಲ್ಲೆಂದರಲ್ಲಿ ಸಿಗುತ್ತಾರೆ. ಈ ಮಾತಿಗೆ ಅಪವಾದವೆಂಬತ್ತೆ ’ಜಗವೆಲ್ಲ ನಗುತಿರಲಿ / ಜಗದಳುವು ನನಗಿರಲಿ॒॒.॒’ಎಂಬ ಎತ್ತರದ ಮನೋಭಾವದವರು ಕವಿ ಈಶ್ವರ ಸಣಕಲ್ಲ ಇವರ॒ಮಾ॒ತು ಎಲ್ಲರ ಕಣ್ಣು ತೆರೆಸುತ್ತದೆ. ಇಂಥ ತ್ಯಾಗ, ವಿಶಾಲ ಮನಸ್ಸಿನವರು ಇಂದು ಲಭ್ಯವಾಗುವದು ದುಸ್ತರವಾದುದು. ಜಗದ ನೋವು, ಅಳುವು ನನಗಿರಲಿ ಎಂಬ ಔದಾರ್ಯದ ಮನಸ್ಥಿತಿಗೆ, ಸಸಾರವಾಗದ ಸಂಸಾರದಲ್ಲಿ, ಸತ್ಯ ನಿಷ್ಠುರತನದಿ ಬಾಳಿದ ಇವರ ಜೀವನಾದರ್ಶ ಅನನ್ಯವಾದುದು.
ಸರಳ, ಸೌಜನ್ಯದ, ಸಹೃದಯ ಕವಿ ಈಶ್ವರ ಸಣಕಲ್ಲ ಇವರದು ಮೇರು ವ್ಯಕಿತ್ವ. ಇವರಿಟ್ಟ ಆದರ್ಶ, ಸಾಹಿತ್ಯ ಸೇವೆ, ಸಾಧನೆ ಅನ್ಯನ್ಯ ಹಾಗೂ ಬಹು ದೊಡ್ಡದು.
ಅನಂತ ಕಷ್ಟ ಕೋಟಲೆಯಲ್ಲಿ ಜೀವನುತ್ಸಾವ ಕಳೆದುಕೊಳ್ಳದೆ ತಮ್ಮ ಸಾಹಿತ್ಯ ಕೃತಿಗಳಲ್ಲಿ ಜೀವನಾದರ್ಶ, ಸತ್ವ, ಸಾರವನ್ನು ಸಮರ್ಥವಾಗಿ, ಮಾರ್ಮಿಕವಾಗಿ ಮೂಡಿಸಿದ ಬಗೆ ಬೆರಗು ಮೂಡಿಸುತ್ತದೆ. ಕೋರಿಕೆ ಕವನ ’ಜಗವೆಲ್ಲ ನಗುತಿರಲಿ, ಜಗದಳುವು ನನಗಿರಲಿ॒.॒’ಇಂದಿಗೂ ಜನಮಾನಸದಲ್ಲಿ ಮಾಸದೆ ಸ್ಥಿರವಾಗಿ ಉಳಿದಿದೆ.
’ಜಗವೆಲ್ಲ ನಗುತಿರಲಿ / ಜಗದಳುವು ನನಗಿರಲಿ॒॒.॒ ಕವನ ರಚಿಸಿದ ಜಗದಗಲ, ಮಿಗೆಯಗಲ ಮನಸ್ಸಿನ ಮೇರು ಕವಿಯ ಕುರಿತು ತಿಳಿಯಬೇಕೆನ್ನುವ ಕುತೂಹಲ, ತುಡಿತ ಈ ನನ್ನ ಕಿರು ಲೇಖನಕ್ಕೆ ಸ್ಪೂರ್ತಿ. ಇನ್ನೊಬ್ಬರನ್ನು ತುಳಿದು ಬದುಕುವವರು, ಇನ್ನೊಬ್ಬರ ನಗುವನ್ನು ಕಸಿದುಕೊಳ್ಳುವ ನಿರ್ದಯಿಗಳು, ಮಾನವೀಯತೆಯನ್ನು ಮರೆತ ದಾನವರು ಇಂದು ಬೆಡಿಕೊಳ್ಳುವ ಮಹಾನ್ ವ್ಯಕ್ತಿಯ ಮನಸ್ಸಿನ ಉದಾತ್ತತೆ ಅನುಪಮವಾದುದು. ಪರರಿಗೆ ನೋವು ಕೊಡದೆ ಅಡ್ಡ ದಾರಿ ತುಳಿಯದೆ ಸತ್ಯದ ದಾರಿಯಲಿ ಸಾಗಿ ಸಾರ್ಥಕ ಬದುಕನ್ನು ಕಂಡು ಕೊಂಡ ಮಹಾ ಚೇತನ ಈ ಈಶ್ವರ ಸಣಕಲ್ಲ ಇವರು.
ಈ ಮೇರು ವ್ಯಕ್ಟಿತ್ವದ ಕುರಿತು ತಿಳಿಯಬೇಕೆಂಬ, ಅರಿಯಬೇಕೆಂಬ ಹಂಬಲ, ತುಡಿತ ನನ್ನಲ್ಲಿ ಇತ್ತು. ಈ ದಿಸೆಯಲ್ಲಿ ಅಂತರ್ಜಾಲದಿಂದ ಹಾಗೂ ಅವರಿವರಿಂದ ಮಾಹಿತಿ ಪಡೆದು ಈ ಲೇಖನ ಸಿದ್ಧಪಡಿಸಿದೆನು. ೧೯೭೩-೭೪ ರಲ್ಲಿ ನಾನು ಜೆ.ಎನ್.ಮೆಡಿಕಲ್ ಕಾಲೇಜಿನಲ್ಲಿ ನನ್ನ ಸೇವೆಯನ್ನು ಆರಂಭಿಸಿದೆನು. ಆಗ ಕಾಲೇಜಿನ ಕ್ಯಾಂಟಿನ್ ದಲ್ಲಿ ಸೀದಾ ಸಾದಾ ಹಿರಿಯರೊಬ್ಬರು ಒಬ್ಬರೆ ಕುಳಿತು ಚಹಾ ಕುಡಿದು ಹೋಗುವದನ್ನು ನೋಡಿದ್ದೆನು. ಯಾಕೋ ಅವರ ಆ ವ್ಯಕ್ತಿತ್ವ ನನ್ನನ್ನು ಸೆಳೆಯಿತು. ಸ್ನೇಹಿತರೊಬ್ಬರು ಹೇಳಿದರು ” ಅವರು ಈಶ್ವರ ಸಣಕಲ್ಲ, ದೊಡ್ಡ ಕವಿಗಳು, ಇಲ್ಲಿ ನಾಗನೂರ ರುದ್ರಾಕ್ಷಿಮಠದಲ್ಲಿರುತ್ತಾರೆ ಎಂದು ತಿಳಿಸಿದರು. ಮತ್ತೆ ಅವರು ಕಾಣಲಿಲ್ಲ. ಅವರೊಂದಿಗೆ ಮಾತನಾಡಬೇಕೆಂಬ ನನ್ನಾಸೆ ಹಾಗೇ ಉಳಿಯಿತು.
ಮಾಸಿದ ಕೋಟು, ರಟ್ಟಿನ ಟೊಪ್ಪಿಗೆ, ಧೋತರ, ಹೆಗಲಿಗೊಂದು ಚೀಲ, ಕೈಯಲ್ಲಿ ಛತ್ರಿ. ಕಾಣಲು ಸಾಮಾನ್ಯರೆನಿಸಿದರೂ ಅಸಮಾನ್ಯ ಚಿಂತಕರು, ಸಾಹಿತ್ಯ ಸಾಧಕರು ಇವರಾಗಿದ್ದರು. ಬದುಕಿನ ಬವಣೆ, ಬಡತನ ಇವರನ್ನು ಕುಗ್ಗಿಸಿದರೂ ಇವರ ಸಾಹಿತ್ಯ ಸಿರಿ ಅತ್ಯುನ್ನತವಾಗಿತ್ತು. ಗ್ರಾಮೀಣ ಪರಿಸರದಲ್ಲಿ ವಿಕಸಿಸಿದ ಇವರು ಸಂವೇದನಾಶೀಲ ಹಾಗೂ ವಿಶಿಷ್ಟ ಬರಹಗಾರರಾದರು. ಸಮಾಜದಲ್ಲಿ ನೆಲೆನಿಂತ ಮೋಸ, ವಂಚನೆ, ತಾರತಮ್ಯ, ಮೌಢ್ಯ, ಒಲವು, ಪರಿಸರ ಇಂತೆಲ್ಲವುಗಳ ಕುರಿತಾದ ವಿಷಯಗಳು ಇವರ ಸಾಹಿತ್ಯದಲ್ಲಿ ಸಮರ್ಥವಾಗಿ, ಅರ್ಥಪೂರ್ಣವಾಗಿ ಮೂಡಿವೆ. ಓದುಗನ ಮನ ತಟ್ಟುತ್ತವೆ, ಮುಟ್ಟುತ್ತವೆ ಹಾಗೂ ಚಿಂತನೆಗೆ ಹಚ್ಚುತ್ತವೆ.
ಇವರಿಗೆ ಸಣ್ಣವರಿದ್ದಾಗಲೆ ಮದುವೆಯಾಗಿತ್ತು. ಮೊದಲನೆ ಮಡದಿ ಹೆಣ್ಣು ಮಗುವನ್ನು ಹಡೆದು ತೀರಿದರು. ಸಣಕಲ್ಲ ಇವರು ಮತ್ತೊಂದು ಮದುವೆ ಮಾಡಿಕೊಂಡರು. ಎರಡನೆ ಹೆಂಡತಿಗೆ ಐದು ಗಂಡು, ಐದು ಹೆಣ್ಣು ಮಕ್ಕಳು ಇದ್ದವು. ಹೀಗೆ ಒಟ್ಟು ಹನ್ನೊಂದು ಮಕ್ಕಳ ತಂದೆ ಇವರಾಗಿದ್ದರು. ಬಾಗಲಕೋಟೆ ಜಿಲ್ಲೆಯರಬಕವಿಇವರ ಸ್ವಂತ ಊರು. ಐದು ವರುಷದವರಿದ್ದಾಗ ಇವರ ತಂದೆ ತೀರಿದರು.
ಜಗವೆಲ್ಲ ನಗುತಿರಲಿ
ಜಗದಳುವು ನನಗಿರಲಿ
ನಾನಳಲು ಜಗವೆನ್ನನೆತ್ತಿಕೊಳದೆ ?
ನಾ ನಕ್ಕು ಜಗವಳಲು ನೋಡಬಹುದೇ ?
ತೆರವಾಗಿ ನನ್ನೆದೆಯು ,
ಧರೆಯೆದೆಯು ಉಕ್ಕಿರಲಿ
ಧರೆಯೊಳಗೆ ತೇಲಿಸುವೆನೆನ್ನೆದೆಯನು
ಧರೆ ಬತ್ತಿ ಎನ್ನೆದೆಯು ಉಕ್ಕಲೇನು ?
ಪೊಡವಿಯೈಸಿರಿವಡೆದು
ಬಡತನವು ನನಗಿರಲಿ
ಕೈಯೊಡ್ಡೆ ಪೊಡವಿಯೆನಗಿಕ್ಕದೇನು ?
ಪೊಡವಿಯೇಮೈಯಳಿಯೆ, ಮಾಡಲೇನು ?
ವಿಶ್ವವನು ತುಂಬಿರುವ
ಈಶ್ವರನೆ ಅಳತೊಡಗೆ
ಸೈತಿಡಲು, ಸೈಪಿಡಲು ಬರುವನಾವಂ ?
’ಹೋ ತಂದೇ; ಎನಲೆನ್ನನೆ ಕಾವಂ ?
ಗೋಕಾಕ ತಾಲೂಕಿನ ಯಾದವಾಡ ಗ್ರಾಮದಲ್ಲಿ ನೇಕಾರಿಕೆ ವೃತ್ತಿಯಲ್ಲಿದ್ದ ತಂದೆ ಮಹಾರುದ್ರಪ್ಪ ತಾಯಿ ನೀಲಾಂಬಿಕೆ ಇವರ ಪುಣ್ಯ ಗರ್ಭದಲ್ಲಿ ೧೯೦೬ , ಡಿಸೆಂಬರ ೨೦ ರಂದು ರಬಕವಿಯಲ್ಲಿ ಜನಿಸಿದ ಇವರಿಗೆ ಸಾಹಿತ್ಯದ ಗೀಳು ಅಂಟಿಕೊಂಡಿತು. ಇವರ ಪ್ರಾಥಮಿಕ ಶಿಕ್ಷಣ ತಾಯಿಯ ತವರೂರಾದ ಯಾದವಾಡ ಮತ್ತು ರಬಕವಿಯಲ್ಲಿ, ಮಾಧ್ಯಮಿಕ ಶಿಕ್ಷಣ ೧೯೨೯ ಅಲ್ಲಿ ಬೆಳಗಾವಿಯ ಜಿ.ಎ.ಹೈಸ್ಕೂಲಿನಲ್ಲಿ ಮುಗಿಯಿತು. ಮುಂದಿನ ಶಿಕ್ಷಣಕ್ಕಾಗಿ ಕೊಲ್ಲಾಪೂರದ ರಾಜಾರಾಮ ಕಾಲೇಜಿಗೆ ಪ್ರವೇಶ ಪಡೆದರು. ಆದರೆ ಆರ್ಥಿಕ ಬಿಕ್ಕಟಿನ ಹಿನ್ನೆಲೆಯಲ್ಲಿ ಇವರ ಓದು ಮುಂದುವರೆಯಲಿಲ್ಲ. ಬದುಕಿನಲ್ಲಿ ಕಷ್ಟ ಕರ್ಪಣ್ಯಗಳಿದ್ದರೂ ಸತ್ಯ, ಪ್ರಾಮಾಣಿಕತೆಯನ್ನೆಂದೂ ಬಿಟ್ಟಿರಲಿಲ್ಲ. ಡಾ. ಆರ್. ಸಿ. ಹಿರೇಮಠ ಇವರು, ಇವರ ಪಾಂಡಿತ್ಯವನ್ನರಿತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿಭಾಗದಲ್ಲಿ ಸೇವೆ ಸಲ್ಲಿಸಲು ಸದವಕಾಶ ನೀಡಿದರು. ೧೯೬೨ ರಿಂದ ಒಂದು ದಶಕಗಳವರೆಗೆ ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಇವರು ಅಲ್ಲಿ ಸೇವೆ ಸಲ್ಲಿಸಿದ್ದಾರೆ.
ಮಾಧ್ಯಮಿಕ ಶಿಕ್ಷಣ ಕಲಿಯುತ್ತಿರುವಾಗ ಇವರ ಸದಭಿರುಚಿಯ ಫಲವಾಗಿ ಹಲವಾರು ಕವನಗಳನ್ನು ಇವರು ರಚಿಸಿದ್ದರು. ತಮ್ಮ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಶಿವಾನಂದ ಸ್ವಾಮಿಗಳ ’ಬ್ರಹ್ಮಚರ್ಯವೇ ಜೀವನ, ವೀರ್ಯ ನಾಶವೇ ಮೃತ್ಯು ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದರು. ಇವರ ಕೋರಿಕೆ (ಕವನ ಸಂಕಲನ), ಹುಲ್ಕಲ್ಗೆ ಕಿಡಿ (ಕವನ ಸಂಕಲನ), ಬಟ್ಟೆ (ಕಥಾ ಸಂಕಲನ), ಸಂಸಾರ ಸಮರ ( ಕಾದಂಬರಿ), ಗ್ರಾಮೋದ್ಧಾರ (ಅನುವಾದಿತ ಕೃತಿ) ಹೀಗೆ ಇವರ ಒಟ್ಟು ಇಪ್ಪತ್ತು ಕೃತಿಗಳು ಪ್ರಕಟಗೊಂಡಿವೆ. ’ಬಟ್ಟೆ’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ೧೯೮೦ ರಲ್ಲಿ ಬೆಳಗಾವಿಯಲ್ಲಿ ಜರುಗಿದ ೫೨ ನೇ ಅಖಿಲ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು.
೧೯೩೪ ರಲ್ಲಿ ಇವರ ಪ್ರಥಮ ಕವನ ಸಂಕಲನ ’ಕೋರಿಕೆ’ ಪ್ರಕಟವಾಯಿತು. ಶರಣ ಸಂದೇಶ, ಖಾದಿ ಗ್ರಾಮೋದ್ಯೋಗ, ಮುಂಬಯಿಂದ ಹೊರಡುತ್ತಿದ್ದ ಸಹಕಾರ ಹೀಗೆ ಹಲವಾರು ಪತ್ರಿಕೆಗಳಲ್ಲಿ ಇವರು ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ. ವಚನ ಪಿತಾಮಹ ಫ.ಗು.ಹಳಕ್ಟ್ಟಿ ಇವರ ಶಿವಾನುಭವ ಮತ್ತು ನವಕರ್ನಾಟಕ ಪತ್ರಿಕೆಯ ಸಹಾಯಕರಾಗಿ ಸೇವೆ ಸಲ್ಲಿಸಿದರು.
ನೆಲದ ಮರೆಯ ನಿಧಾನದಂತ್ತಿರುವ ಇವರ ತತ್ವಾದರ್ಶ, ಚಿಂತನೆ, ಬದುಕು ಬವಣೆ, ಸಾಹಿತ್ಯ ಸಾಧನೆ ಹೀಗೆ ಪೂರ್ಣ ಪ್ರಮಾಣದ ಅಧ್ಯಯನ, ಗೋಷ್ಠಿ ನಡೆಯಬೇಕು. ಇವರ ಅಪ್ರಕಟಿತ ಸಾಹಿತ್ಯ ಸಂಪಾದನೆ, ಪ್ರಕಟಣೆ ನಡೆಯಬೇಕು. ಸಾಗರದಷ್ಟು ಸಾರವತ್ತಾದ ಇವರ ಬದುಕಿನ ಮೇಲೆ ಒಂದು ಬಿಂದು ಮಾತ್ರದಷ್ಟು ಮಾತ್ರ ಕಿರು ಲೇಖನ ಬರೆಯುವ ಪ್ರಯತ್ನ ನನ್ನದಾಗಿದೆ.
೧೯೮೪, ಡೆಸೆಂಬರ, ೩ ರಂದು ಇವರು ಕಾಲವಶರಾದರು. ಅವರು ಅಳಿದರೂ ಅವರ ಉತ್ಕೃಷ್ಟ ಸಾಹಿತ್ಯ ಜನಮಾನಸದಲ್ಲಿ ಸ್ಥಿರಸ್ಥಾಯಿಯಾಗಿ ಉಳಿದಿದೆ.