MLC ಶಿವಕುಮಾರ್ ಕೇವಲ ಬೈಲೈನ್ ಗೆ ಫಿಕ್ಸ್ ಆದ ಪತ್ರಕರ್ತರಲ್ಲ: ಕೆ.ವಿ.ಪ್ರಭಾಕರ್

Ravi Talawar
MLC ಶಿವಕುಮಾರ್ ಕೇವಲ ಬೈಲೈನ್ ಗೆ ಫಿಕ್ಸ್ ಆದ ಪತ್ರಕರ್ತರಲ್ಲ: ಕೆ.ವಿ.ಪ್ರಭಾಕರ್
WhatsApp Group Join Now
Telegram Group Join Now

ಪತ್ರಕರ್ತನ‌ ಆಚೆಗೆ ಕ್ರಿಯಾಶೀಲವಾಗಿ ಯೋಚಿಸುವ political activist: ಕೆವಿಪಿ

ಬೆಂಗಳೂರು ಸೆ 18: ಡಾ.ಶಿವಕುಮಾರ್ ಕೇವಲ ಬೈ ಲೈನ್ ಗಳಿಗಾಗಿ ಸ್ಟೋರಿಗಳನ್ನು ಬರೆಯುವ ಪತ್ರಕರ್ತ  ಅಲ್ಲ,  ಬದಲಿಗೆ ಪತ್ರಕರ್ತನ‌ ಆಚೆಗೆ ಯೋಚಿಸುವ ಮತ್ತು ಕ್ರಿಯಾಶೀಲವಾಗಿರುವ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತ ಎಂದು  ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಮೆಚ್ಚುಗೆ ಸೂಚಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ನೂತನ ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಮಾತುಗಳನ್ನು ಆಡಿದರು.

ನಾನು ಕೇವಲ ಬೈ ಲೈನ್ ಗಳಿಂದ ಪತ್ರಕರ್ತರ ವ್ಯಕ್ತಿತ್ವವನ್ನು ಅಳೆಯುವುದಿಲ್ಲ. ಬಹಳ ಸಾರಿ ತಮ್ಮ ಅಂತರಂಗಕ್ಕೆ ಒಪ್ಪಿಗೆ ಇಲ್ಲದ್ದನ್ನೂ ಒಳ್ಳೆ ಬೈ ಲೈನ್ ಸ್ಟೋರಿ ಬರೆಯುವವರು ಇದ್ದಾರೆ. ಆದರೆ, ಶಿವಕುಮಾರ್ ಹಾಗಲ್ಲ. ಇವರ ಬೈ ಲೈನ್ ಮತ್ತು ಬ್ರೈನ್ ಲೈನ್ ಹಾಗೂ ಬದುಕಿನ ಬದ್ಧತೆ ಒಂದೇ ಆಗಿದೆ.

ತಮ್ಮ ಜಾತಿ ಯಾವುದೆಂದು ಗೊತ್ತಿಲ್ಲದ, ತಮ್ಮ ತಂದೆ ತಾಯಿ ಕೂಡ ಯಾರು ಎಂದು ಗೊತ್ತಿಲ್ಲದ ಇಬ್ಬರು ಹೆಣ್ಣು ಮಕ್ಕಳ ಕುರಿತಾಗಿ ಶಿವಕುಮಾರ್ ಅವರು “Indians are orphans” (ಭಾರತೀಯರು ಅನಾಥರು) ಎನ್ನುವ ಒಂದು ಸ್ಟೋರಿ ಬರೆದಿದ್ದರು.

ಒಡನಾಡಿ ಸಂಸ್ಥೆಯಲ್ಲಿ ಬೆಳೆದ ಇಬ್ಬರು ಅನಾಥ ಹೆಣ್ಣು ಮಕ್ಕಳು ಕಾಲೇಜಿಗೆ ಸೇರುವಾಗ ತಮ್ಮ ಧರ್ಮ ಮತ್ತು ಜಾತಿಯ ಕಾಲಂನಲ್ಲಿ   “ಭಾರತೀಯರು” ಎಂದು ಬರೆಸಿದ್ದರು. ಹೀಗಾಗಿ ಇವರು ಮುಂದೆ ಓದಿ ಕೆಲಸಕ್ಕೆ ಸೇರುವಾಗ ಮೀಸಲಾತಿಯಿಂದ ವಂಚಿತರಾದರು. ಆಗ ಶಿವಕುಮಾರ್ ಅವರು ಈ ಸ್ಟೋರಿ ಬರೆದದ್ದು ಮಾತ್ರವಲ್ಲ, ಬರೆದ ಬಳಿಕ‌ ಆ ಇಬ್ಬರೂ ಹೆಣ್ಣು ಮಕ್ಕಳಿಗೆ ಅವರ ಪಾಲಿನ ಅವಕಾಶ ಒದಗಿ ಬರುವಂತೆ ಕೆಲಸ ಮಾಡಿದರು.

ಶಿವಕುಮಾರ್ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದು ಅತ್ಯಂತ ಉತ್ತಮ ಅವಧಿ ಎನ್ನುವುದನ್ನು ನಾನು ಕೇಳಿದ್ದೇನೆ.

ದೃಶ್ಯ ಮಾಧ್ಯಮದ ಆ್ಯಂಕರ್ ಗಳು, ರಿಪೋರ್ಟರ್ ಗಳು ಬಳಸುವ ಭಾಷೆ ಹೇಗಿರಬೇಕು, ದೃಶ್ಯ ಮಾಧ್ಯಮದವರಿಗೆ ಇರಬೇಕಾದ ವೃತ್ತಿಪರ ಸಭ್ಯತೆ ಬಗ್ಗೆಯೇ ಒಂದು ಕಾರ್ಯಾಗಾರ ನಡೆಸಿದ್ದರು. ಇದು ಬಹಳ ಮುಖ್ಯವಾದ ಸಂಗತಿ.

ಹಾಗೆಯೇ ಪತ್ರಕರ್ತರಿಗೆ ಕನ್ನಡ ಭಾಷೆ ಮತ್ತು ಭಾಷೆ ಬಳಸುವ ಬಗ್ಗೆಯೇ ಒಂದು ಕಾರ್ಯಾಗಾರ ನಡೆಸಿದ್ದರು.

ಇವರು ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಮೈಸೂರಿನಲ್ಲಿ ಕೋಮುಗಲಭೆ ನಡೆಯಿತು. ಆಗ ಪತ್ರಕರ್ತರಿಗೆ ಪಿ.ಲಂಕೇಶ್ ಅವರ ಸಂಕ್ರಾಂತಿ ನಾಟಕ ಆಡಿಸಿದರು.

ಹೀಗೆ ಪತ್ರಕರ್ತರಾಗಿದ್ದೂ ಶಿವಕುಮಾರ್ ಕೇವಲ‌ ಪತ್ರಕರ್ತ ಮಾತ್ರ ಆಗಿರಲಿಲ್ಲ ಎನ್ನುವುದಕ್ಕೆ ನೂರಾರು ಉದಾಹರಣೆ ಕೊಡಬಹುದು‌.

ಮಾಧ್ಯಮ ಅಕಾಡೆಮಿ‌ ಸದಸ್ಯರಾಗಿದ್ದಾಗ ದಲಿತ ವಿದ್ಯಾರ್ಥಿಗಳಿಗೆ ಫೆಲೋಶಿಪ್, ಇಂರ್ಟನ್ ಶಿಪ್ ಕೊಡುವ ನಿಯಮ ಮಾಡಿಸಿದರು. ಇದರಿಂದ ಹತ್ತಾರು ಮಂದಿ ಶೋಷಿತ ಸಮುದಾಯದ ಮಕ್ಕಳು ಪತ್ರಿಕೋದ್ಯಮಕ್ಕೆ ಎಂಟ್ರಿ ಆಗಲು ಅವಕಾಶ ಆಯಿತು.

ಹೀಗೆ ಜಾತಿ, ಲಿಂಗ, ಧಾರ್ಮಿಕ‌ ಶೋಷಿತರ ಪರವಾಗಿ ಪತ್ರಕರ್ತರಾಗಿ ಬರೆದದ್ದು ಮಾತ್ರವಲ್ಲ, ಆ ಬಗ್ಗೆ ಕೆಲಸವನ್ನೂ ಮಾಡಿದ್ದಾರೆ.

ಇಷ್ಟೆಲ್ಲಾ ಒಳನೋಟ ಇದ್ದ ಡಾ.ಶಿವಕುಮಾರ್ ಅವರಿಗೆ ರಾಜಕೀಯ ವರದಿಗಾರರಾಗಿ ಸಹಜವಾಗಿ ರಾಜಕೀಯ ನಾಯಕರ ಒಡನಾಟವೂ ಒದಗಿ ಬಂದಿತ್ತು. ಒಂದು ಪಕ್ಷದ ಪರವಾಗಿ ಅಂಟಿಕೊಳ್ಳದ ಶಿವಕುಮಾರ್ ಅವರಿಗೆ ಎಲ್ಲಾ ಪಕ್ಷದಲ್ಲೂ ಆತ್ಮೀಯರಾದ ನಾಯಕರಿದ್ದಾರೆ. ಆದರೆ, ಶಿವಕುಮಾರ್ ಅವರು ವೈಯುಕ್ತಿಕವಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದಾಮಯ್ಯ ಅವರ ಸಾಮಾಜಿಕ ನ್ಯಾಯ ಪರವಾದ ಕಾಳಜಿಗಳ ಜೊತೆಗೇ ಇದ್ದಾರೆ ಎನ್ನುವುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳು ಶಿವಕುಮಾರ್ ಅವರನ್ನು ಪರಿಷತ್ತಿಗೆ ನೇಮಕ ಮಾಡುವಾಗ ಸುಮ್ಮನೆ ಮಾಡಿರುವುದಿಲ್ಲ. ಸಮಗ್ರವಾಗಿ ಯೋಚಿಸಿಯೇ ಮಾಡಿದ್ದಾರೆ ಎಂದು ಭಾವಿಸುತ್ತೇನೆ.

ಹೀಗಾಗಿ, ಡಾ.ಶಿವಕುಮಾರ್ ಅವರು ಈಗ ವಿಧಾನ ಪರಿಷತ್ ಸದಸ್ಯರಾಗಿರುವುದು ಹೊರಗಿನವರಿಗೆ ಆಶ್ಚರ್ಯದ ಸಂಗತಿ ಆಗಿರಬಹುದು. ಆದರೆ, ನನಗೇನೂ ಆಶ್ಚರ್ಯದ ಸಂಗತಿಯಲ್ಲ. ಏಕೆಂದರೆ ಡಾ.ಶಿವಕುಮಾರ್ ಅವರ ಶಕ್ತಿ, ಸಾಮರ್ಥ್ಯ, ಬದ್ಧತೆಯನ್ನು ನಾನು ಕಳೆದ ಹತ್ತು ವರ್ಷಗಳಿಂದ ಹೆಚ್ಚು ಆತ್ಮೀಯವಾಗಿ ಗಮನಿಸಿದ್ದೀನಿ.

ಬಡತನಕ್ಕೆ ಲಿಂಗ-ಜಾತಿ-ಧರ್ಮದ ಹಂಗಿಲ್ಲ ಎನ್ನುವುದನ್ನು ಹೇಳಿಕೊಂಡು ಪಾಲಿಸಿಕೊಂಡು ಬರುತ್ತಿರುವ ಡಾ.ಶಿವಕುಮಾರ್ ಅವರ political activist ಪಯಣ 20 ವರ್ಷಗಳ ಹಿಂದೆಯೇ ಶುರುವಾಗಿ ಈಗ  MLC ಆಗುವ ಇವರ ಜವಾಬ್ದಾರಿ ಹೆಚ್ಚಿದೆ. ಈ ಮೂಲಕ
ಪತ್ರಕರ್ತ ಸಮುದಾಯದ ಸಂಕಷ್ಟಗಳಿಗೆ ಧ್ವನಿ ಆಗ್ತಾರೆ, ನಮ್ಮ ಜೊತೆ ಒಡಗೂಡಿ ಕೆಲಸ ಮಾಡುತ್ತಾರೆ ಎನ್ನುವ ಆಶಯ ಮತ್ತು ಭರವಸೆ ನನಗಿದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸೇರಿ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article