ರಾಮದುರ್ಗ: ಪ್ರಶಿಕ್ಷಣಾರ್ಥಿಗಳು ಮೊದಲು ತಮ್ಮ ದೈಹಿಕ ಮತ್ತು ಮಾನಸಿಕ ಸದೃಢತೆ ಸಾಧಿಸಿಕೊಂಡು, ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಲ್ಲಿ ಮಾತ್ರ ಆಧುನಿಕ ಜಗತ್ತಿನಲ್ಲಿ ಜ್ಞಾನ ನೀಡಲು ಸಹಕಾರಿಯಾಗುತ್ತದೆ ಎಂದು ವಚನ ವಾಹಿನಿಯ ಸಂಪಾದಕ ಸಿದ್ದು ಯಾಪಲಪರವಿ ಹೇಳಿದರು.
ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ವಚನ ಚಿಂತನ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತರ್ಕಬದ್ಧವಾಗಿ ಮಾತನಾಡುವ ವಿಚಾರ ಮಾಡುವ ಪ್ರವೃತ್ತಿ ಬೆಳೆಸಿಕೊಂಡಾಗ ಮಾತ್ರ ಪರಿಪೂರ್ಣ ಜ್ಞಾನವಂತರಾಗಲು ಸಾಧ್ಯವಿದೆ. ಪಡೆದ ಜ್ಞಾನವನ್ನು ಮತ್ತೊಬ್ಬರಿಗೆ ತಿಳಿಸಿಕೊಟ್ಟಲ್ಲಿ ಜ್ಞಾನದ ಪ್ರಸಾರ ಉಂಟಾಗಿ ವಿದ್ಯಾರ್ಥಿಗಳ ಹಾಗೂ ಸಾಮಾಜಿಕ ಪ್ರಗತಿ ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಪ್ರೊ. ಎಸ್.ಎಸ್. ಸುಲ್ತಾನಪೂರ, ಶರಣರ ವಚನಗಳಲ್ಲಿ ಸಾಮಾಜಿಕವಾಗಿ ಹೇಗೆ ಬದುಕಬೇಕೆಂಬ ಜ್ಞಾನ ಬಂಢಾರ ಅಡಗಿದೆ. ವಚನ ಚಿಂತನ ಕಾರ್ಯಕ್ರಮ ಪ್ರಶಿಕ್ಷಣಾರ್ಥಿಗಳ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಸಾಹಿತ್ಯಾಧ್ಯಯನ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಣ ಮಹಾವಿದ್ಯಾಲಯದ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ.ಸಿ.ವೈ. ಕುಲಗೋಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಯೋಜಕ ಪ್ರೊ. ಎಸ್. ಲೇಪಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾ ಪ್ರಸಾರಕ ಸಮಿತಿಯ ಸದಸ್ಯರಾದ ಡಾ.ವೈ.ಬಿ. ಕುಲಗೋಡ, ವಿ.ಜಿ. ಬೈಲವಾಡ, ಎಸ್.ಬಿ. ಸೊಬರದ, ಬಿ.ಎಸ್. ಪಾಟೀಲ, ಜಿಮಖಾನಾ ಉಪಾಧ್ಯಕ್ಷ ಡಾ.ವಿ.ಬಿ. ವಗ್ಗರ, ಉಪನ್ಯಾಸಕರಾದ ಡಾ.ಎನ್.ಎನ್. ವಾಳ್ವೇಕರ, ಪ್ರೊ.ಜಿ.ಪಿ. ಗಡದೆ, ಜಿ.ಬಿ. ಬಟಕುರ್ಕಿ, ಮಂಜುಳಾ .ಎಚ್. ರಾಠೋಡ, ದೈಹಿಕ ಶಿಕ್ಷಣ ನಿರ್ದೇಶಕ ಆನಂದ ಲಮಾಣಿ ಸೇರಿದಂತೆ ಇತರರಿದ್ದರು.
ಪ್ರಾಚಾರ್ಯ ಡಾ. ಆರ್.ಎಲ್. ಕುಳ್ಳೂರ ಸ್ವಾಗತಿಸಿದರು. ಉಪನ್ಯಾಸಕಿ ಶಿವಲೀಲಾ ಗೋಲನ್ನವರ ನಿರೂಪಿಸಿದರು. ಪ್ರೊ. ಎಸ್.ಎಂ. ನಾಯಕ ವಂದಿಸಿದರು.
