ಭಾನುವಾರ ಬೆಂಗಳೂರಿನ ನಾಗರಬಾವಿಯಲ್ಲಿ ಬಾಡಿಗೆ ಮನೆಯಲ್ಲಿರುವ ಮಗನ ಮನೆಯಲ್ಲಿದ್ದೆ. ಮದ್ಯಾಹ್ನ ಮನೆಗೆ ಬಂದ ಮಗನ ಸ್ನೇಹಿತ ಅವರ ಮನೆಗೆ ಸಂಜೆ ನಾವು ದಂಪತಿಗಳು ನಮ್ಮ ಮನೆಗೆ ಬರಬೇಕೆಂದು ಆಹ್ವಾನಿಸಿದ. ಸರಿ ಸಂಜೆವಾಕ್ ಎಂದು ಮನೆಗೆ ಹೋದೆವು. ತುಂಬಾ ಲಕ್ಸುರಿಯಾದ ಮನೆ. ಅಣ್ಣ ತಮ್ಮ ಇಬ್ಬರೂ ಇಂಜಿನಿಯರ್‌ಗಳೇ. ವಿಶೇಷವಾಗಿ ಅಣ್ಣ ನನ್ನ ಗಮನ ಸೆಳೆದನು. ಈಗಿನ ಫಿಲಂ ಫೀಲ್ಡ್‌ನವರು ಹಿಂದೆ ಕೂದಲು ಬಿಡುವಂತೆ ಆತನು ಬಿಟ್ಟಿದ್ದನು. ಆತ ಬಾಂಬೆಯಲ್ಲಿ ಫಿಲಂ ಡೈರೆಕ್ಷನ್ ಫೀಲ್ಡ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಲು ನನಗೆ ಕುತೂಹಲ ಉಂಟಾಯಿತು. ಆಗ ನನಗೆ ತಕ್ಷಣಕ್ಕೆ ಸಿನಿಮಾ ನಿರ್ದೇಶಕ ಸಿದ್ದು ಪೂರ್ಣಚಂದ್ರ ನೆನಪಾದರು. ಅವರು ನಾಗರಬಾವಿಯಲ್ಲಿ ಇರುವುದಾಗಿ ಹೇಳಿದ್ದರು. ಸಿದ್ದುಗೆ ಪೋನ್ ಮಾಡಿದೆ ರಿಸೀವ್ ಆಗಲಿಲ್ಲ. ಇಬ್ಬರನ್ನು ಪರಸ್ಪರ ಪರಿಚಯಿಸೋಣವೆಂದುಕೊಂಡಿದ್ದು ಆಗಲಿಲ್ಲ. ಮಾರನೇ ದಿನ ಬೆಳಿಗ್ಗೆ ಚಿತ್ರನಟ ಮೈಸೂರು ರಮಾನಂದ್ ಮನೆಗೆ ಬಂದರು. ಅವರ ಗೆಜ್ಜೆ ಹೆಜ್ಜೆ ರಂಗತಂಡಕ್ಕೆ ೫೦ ವರ್ಷ ತುಂಬಿದ ನೆನಪಿನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಿ ನನ್ನನ್ನು ಕರೆದಿದ್ದರು ಹೋಗಲು ಸಾಧ್ಯವಾಗಿರಲಿಲ್ಲ. ಅವರು ಮನೆಗೆ ಬಂದವರೇ ಶಾಲು ಹೊದಿಸಿ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಇದು ನನಗೆ ಅನಿರೀಕ್ಷಿತ. ಚಿತ್ರನಟರು ತಮ್ಮ ಐವತ್ತು ವರ್ಷಗಳ ರಂಗಸಾಧನೆಯ ಬೃಹತ್ ಆಲ್ಬಂನ್ನು ಬ್ಯಾಗ್‌ನಿಂದ ತೆಗೆದು ತೋರಿಸುತ್ತಾ ಹೋದರು.
ಸಿನಿಮಾ ಮತ್ತು ನಾಟಕ ರಂಗ ಈ ಎರಡೂ ಕ್ಷೇತ್ರದಲ್ಲೂ ಅವರ ಸೇವೆ ಅಪಾರ. ಅವರ ಈ ಕಲಾಸೇವೆಯನ್ನು ಕರ್ನಾಟಕ ಸರ್ಕಾರ ಗುರುತಿಸಿ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಬೇಕು. ಅಷ್ಟೊಂದು ಕಲಾಸಾಧನೆಯ ಪೋಟೋ, ಪತ್ರಿಕಾ ವರದಿ ಅವರ ದೊಡ್ಡ ಆಲ್ಬಂನಲ್ಲಿ ಅಡಕವಾಗಿತ್ತು. ಅವರನ್ನು ಬೀಳ್ಕೊಟ್ಟು ನಾವು ದಂಪತಿಗಳು ಮೈಸೂರಿಗೆ ದ ಹೊರಟೆವು. ಬಸ್ಸಿನಲ್ಲಿ ಮೈಸೂರು ರಮಾನಂದ್ ಅವರ ಆಶಾಜ್ಯೋತಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಕಿರು ನಾಟಕ ಕೃತಿ ಓದುತ್ತಿದ್ದೆ ಸಿದ್ಧು ಪೂರ್ಣಚಂದ್ರರ ಪೋನ್ ಬಂತು. ’ಸಾರ್, ನೆನ್ನೆ ನೀವು ನನಗೆ ಪೋನ್ ಮಾಡಿದಾಗ ದಸರಾ ಸಿನಿಮಾ ಫೆಸ್ಟಿವೆಲ್‌ನಲ್ಲಿ ನನ್ನ ನಿರ್ದೇಶನದ ಪುಟ್ಟಣ್ಣನ ಕತ್ತೆ ಸಿನಿಮಾದ ಸಂವಾದ ಕಾರ್ಯಕ್ರಮದಲ್ಲಿ ಬಿಸಿಯಾಗಿದ್ದೆ ಎಂದರು. ಕೂಡಲೇ ನಾನೀಗ ಮೈಸೂರಿಗೆ ಬರುತ್ತಿದ್ದೇನೆ ಎಂದೆ. ಹೌದ! ಹಾಗಾದರೆ ಮಾಲ್ ಆಫ್ ಮೈಸೂರ್ ಶಾಪಿಂಗ್ ಕಾಂಪ್ಲೆಕ್ಸ್‌ನ ಐನಾಕ್ಸ್‌ನಲ್ಲಿ ಇಂದು ನಾಲ್ಕು ಗಂಟೆಗೆ ಈ ಪಾದ ಪುಣ್ಯಪಾದ ಸಿನಿಮಾ ಪ್ರದರ್ಶನವಿದೆ ಬನ್ನಿ, ನಿಮ್ಮ ಮೈಸೂರು ಮಿತ್ರರಿಗೂ ಹೇಳಿ.. ಎಂದರು.
ಒಂದಿಷ್ಟು ಕವಿಸಾಹಿತಿ ಮಿತ್ರರ ನೆನಪಾಗಿ ಭೇರ್ಯ ರಾಮಕುಮಾರ್, ಕಾಳಿಹುಂಡಿ ಶಿವು, ಎಂಜಿಆರ್ ಆರಸ್, ಹನ್ಯಾಳು ಗೋವಿಂದೇಗೌಡರು, ಎಸ್.ಎಸ್.ಪುಟ್ಟೇಗೌಡರು ಪ್ರಕಾಶಕರು ಓಂಕಾರಪ್ಪ ಹೀಗೆ ಮೈಸೂರು ಮಂದಿಗೆ ಪೋನಾಯಿಸುತ್ತಾ ಹೋದೆ. ಮೈಸೂರು ತಲುಪುವಷ್ಟರಲ್ಲಿ ಪುಟ್ಟೇಗೌಡರು ಮಾತ್ರ ಒಟ್ಟಿಗಾದರು. ನಮ್ಮ ನಾಲ್ಕು ಪಾದಗಳು ನಾಲ್ಕು ಏರೋಲಿಫ್ಟ್ ಮೇಲೆ ಸಾಗಿ ಈ ಪಾದ ಪುಣ್ಯ ಪಾದ ನೋಡಲು ಸೀಟ್‌ನಲ್ಲಿ ಸೆಟಲ್ ಆದವು. ಸಿನಿಮಾ ಕಥಾ ನಾಯಕನ ಪಾದ ಪುಣ್ಯದಾಗಿರಲಿಲ್ಲ ಪಾಪದಿಂದ ಕೂಡಿತ್ತು. ನಾನು ಆನೆಕಾಲು ರೋಗದ ಹೆಸರು ಕೇಳಿದ್ದೆ. ಆದರೆ ಈ ರೋಗ ಸೊಳ್ಳೆಗಳು ಕಚ್ಚಿ ಬರುತ್ತದೆ ಎಂಬ ವಿಚಾರ ತಿಳಿದಿರಲಿಲ್ಲ. ನಿರ್ದೇಶಕ ಪೂರ್ಣಚಂದ್ರ ಎಷ್ಟೊಂದು ಪರಿಪೂರ್ಣವಾಗಿ ಹಳ್ಳಿ ಬದುಕಿನ ನೈಜ ಚಿತ್ರಣವನ್ನು ನಾಜೂಕಾಗಿ ಒಂದು ಸೊಗಸಾದ ಸಿನಿಮಾವಾಗಿಸಿದ್ದಾರಲ್ಲಾ! ಎನಿಸಿತು.
ಆನೆಕಾಲು ರೋಗಕ್ಕೆ ತುತ್ತಾದ ಡ್ರೈವರೊಬ್ಬ ತನ್ನ ತಮ್ಮ ತಂಗಿ ಅಷ್ಟೇ ಏಕೆ ಸ್ವತ: ಪತ್ನಿಯಿಂದ ತಿರಸ್ಕೃತನಾಗಿ ನೋವು ಅನುಭವಿಸುವ ಕಥೆ ಅತ್ಯಂತ ಘನ ಘೋರ! ಇದನ್ನು ತೋರಿಸುತ್ತಲೇ ಒಬ್ಬ ವೈದ್ಯೆಯ ಟಾನಿಕ್‌ನಂತಹ ಸಾಂತ್ವನದ ನುಡಿ, ಆಕೆಯ ಮಾನವೀಯ ನಡೆ ಅಸಹಾಯಕ ಸ್ಥಿತಿಯಲ್ಲಿ ತೊಳಲಾಡುವ ವ್ಯಕ್ತಿ ತನ್ನ ರೋಗಿಷ್ಟ ಪಾದದ ನೋವಿನಲ್ಲೇ ತನ್ನ ಬದುಕನ್ನು ಮತ್ತೇ ಸರಿಪಡಿಸಿಕೊಳ್ಳುವ ಪಾದದ ನಡೆ ಇದೆಯೆಲ್ಲಾ ಅದೇ ಆತ್ಮಸ್ಥೈರ್ಯ! ಆ ನಡೆ ಇಲ್ಲಿ ನಾಟಕೀಯವಾಗಿ ಕಾಣುವುದೇ ಇಲ್ಲ. ಸಿನಿಮಾ ಗೆಲ್ಲುವುದೇ ಇಲ್ಲಿ. ಸಿನಿಮಾದ ಕೇಂದ್ರ ಬಿಂದು ನಮ್ಮ ಪಾದ.
ಈ ಪಾದವನ್ನು ನಮ್ಮ ಬದುಕಿನಲ್ಲಿ ಸಂಸ್ಕೃತಿಯಲ್ಲಿ ನಾನಾ ವಿಧದಲ್ಲಿ ಅರ್ಥೈಸಬಹುದು. ನಾವು ಸ್ವಶಕ್ತಿಯಿಂದ ಎದ್ದು ನಿಲ್ಲಲು ಪಾದ ಬೇಕಷ್ಟೇ! ಮಾನವ ಬದುಕಿನ ಆಧಾರ ಪಾದ. ನಾವು ನಮ್ಮ ತಂದೆತಾಯಿ ಗುರುಹಿರಿಯರಿಗೆ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುತ್ತೇವೆ. ಮನೆಗೆ ಹೊಸದಾಗಿ ಬರುವ ಧರ್ಮಪತ್ನಿ ಬಲಗಾಲಿಟ್ಟು ಬರಲೆಂದು ಆಕೆಯಿಂದ ತುಂಬಿದ ಮನೆ ಶ್ರೇಯೋಭಿವೃದ್ಧಿಯಾಗಲೆಂದು ನಾವು ಬಯಸುತ್ತೇವೆ. ಇದು ನಮ್ಮ ಸಂಸ್ಕೃತಿ ಆಚಾರ ನಂಬಿಕೆ.
ಈ ಪಾದವೇ ರೋಗಗ್ರಸ್ಥವಾಗಿ ಸಮಾಜದ ಮನಸ್ಥಿತಿಯೂ ರೋಗಗ್ರಸ್ತವಾದರೇ ರೋಗಿಯ ಪಾಡೇನು? ತಮ್ಮ ತಂಗಿಯರಿಗೆ ಅಸಹ್ಯ ಹುಟ್ಟಿಸಿದ ಈ ಪಾದವನ್ನೇ ಪುಣ್ಯಪಾದವನ್ನಾಗಿಸುವಲ್ಲಿ ನಿರ್ದೇಶಕರ ಜಾಣ್ಮೆಯ ಕಥೆ ನಾಜೂಕಾಗಿ ತೆರೆದುಕೊಳ್ಳುತ್ತದೆ. ಎಲ್ಲೂ ಆಡಂಬರ ಉತ್ಪ್ರೇಕ್ಷ ಇಲ್ಲದೆ ಹಳ್ಳಿಯ ಬದುಕು. ಅಲ್ಲಿಯ ತಿಪ್ಪೆ ಚರಂಡಿ ಗಲೀಜು, ಸೊಳ್ಳೆಗಳ ಕಡಿತಕ್ಕೆ ಡೆಂಗಿ ಜ್ವರ, ಮಲೇರಿಯಾ ಹರಡುವ ಎಚ್ಚರಿಕೆ ಆದರೆ ಇಲ್ಲಿ ಆನೆಕಾಲು ರೋಗಕ್ಕೆ ತುತ್ತಾದ ದಿನೇಶ ಹಳ್ಳಿಗಳಲ್ಲಿ ಕಾಣಸಿಗುವ ಗಾರೆಯಿಲ್ಲದ ಗೋಡೆ ಮನೆಯ ಜಗುಲಿಯಲ್ಲಿ ಅಸಹಾಯಕನಾಗಿ ಕುಳಿತಲ್ಲಿಂದ ಕಥೆ ಆರಂಭವಾಗುತ್ತದೆ.
ಈ ಹಳ್ಳಿಗೆ ಆರೋಗ್ಯ ವೀಕ್ಷಣೆಗೆ ಬರುವ ವೈದ್ಯೆಗೆ ಈತನ ವಿಚಾರ ತಿಳಿದು ಆತನನ್ನು ಭೇಟಿಯಾಗಿ ಮಾನವೀಯ ನೆಲೆಯಲ್ಲಿ ನೆರವಾಗಲು ಸಿದ್ಧಳಾಗುತ್ತಾಳೆ. ಇತ್ತ ಗಂಡನನ್ನು ತೊರೆದ ಹೆಂಡತಿ ಡೈವೋರ್ಸ್ ಕೊಡಲು ಹೊರಟರೆ, ತಂಗಿಯ ಮದುವೆಗೆ ಅಣ್ಣನು ಬರಬಾರದೆಂದು ತಂಗಿ ತಮ್ಮನೇ ನಿಷ್ಠೂರವಾಗಿ ವರ್ತಿಸುವಲ್ಲಿ ಆ ಜೀವ ಎಷ್ಟು ನೊಂದಿರಬೇಡ? ಆದರೆ ಮಾನವೀಯ ಮೌಲ್ಯಗಳ ಗುಣನಡತೆಯ ವೈದ್ಯೆ ಆ ಜೀವಕ್ಕೆ ಆತ್ಮವಿಶ್ವಾಸ ತುಂಬುತ್ತಾಳೆ.
ಕಡೆಗೆ ತನ್ನ ಟ್ಯ್ರಾಕ್ಟರ್ ಕೀಯನ್ನೇ ಅವನಿಗೆ ಕೊಟ್ಟು ಅದನ್ನು ಓಡಿಸು ನಿನ್ನ ಬದುಕಿಗೆ ಅದೇ ನಿನ್ನ ಪಾದವೇ ದಾರಿ ತೋರಿಸುತ್ತದೆ ಎಂಬ ನಡೆನುಡಿ ಇದೆಯೆಲ್ಲಾ ಅದೇ ಅಲ್ಲವೇ ಸಾರ್ಥಕ್ಯ ಪುಣ್ಯಪಾದ! ಗಂಡ ಬಿಟ್ಟವಳನ್ನು ಕಟ್ಟಿಕೊಳ್ಳುವೆನೆಂದು ಸುಳ್ಳಿನ ಜಾಲದಲ್ಲಿ ಅವಳ ಶೀಲ ಕೆಡಿಸಲು ಹವಣಿಸುವ ಲಾಯರ್‌ನ ನಡೆ ಮತ್ತು ಟಿವಿ ಧಾರಾವಾಹಿ ನಿರ್ದೇಶಕನನ್ನು ಪ್ರೀತಿಸುತ್ತಿದ್ದ ಇದೇ ವೈದ್ಯೆ ಪರಿಚಯಿಸುವ ನಟಿಯನ್ನೇ ಡೈರೆಕ್ಟರ್ ಮದುವೆಯಾಗಿ ವೈದ್ಯೆಗೆ ಮೋಸ ಮಾಡುವ ಕ್ಯಾರೆಕ್ಟರ್ ಮತ್ತೊಂದು ಕಡೆ ವಿಭಿನ್ನ ನೆಲೆಯಲ್ಲಿ ವಿಮರ್ಶೆಗೆ ಒಳಪಡುತ್ತವೆ. ಕಡೆಗೆ ಇದೇ ವೈದ್ಯೆ ಮನೆಯಲ್ಲಿ ಬಿದ್ದು ತನ್ನೆರಡು ಕಾಲಿಗೆ ಪ್ಲಾಸ್ಟರ್ ಹಾಕಿ ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿರುವ ದೃಶ್ಯ ಮತ್ತು ಸನ್ಯಾಸಿಯ ಮರಗಾಲು ಪಾದ ಹಿಡಿದು ದೇವರ ಮೊರೆ ಹೋಗಲು ಬೆಟ್ಟ ಹತ್ತುವ ದಿನೇಶ ಈ ದೃಶ್ಯ ನಮ್ಮ ಜೀವನದ ಏಳುಬೀಳುಗಳ ಸಂಕೇತವಾಗಿ ಬಿಂಬಿಸಿದೆ. ಕಡಗೂ ಒಂದಾಗುವ ದಂಪತಿಗಳು ಸೊಳ್ಳೆಗಳಿಂದ ರಕ್ಷಣೆಗೆ ಜನಜಾಗೃತಿ ಮೂಡಿಸಲು ಸೊಳ್ಳೆ ಬ್ಯಾಟ್ ಮತ್ತು ಪರದೆ ಉಚಿತವಾಗಿ ವಿತರಿಸುವಲ್ಲಿಗೆ ಆರೋಗ್ಯ ಸಂರಕ್ಷಣೆ ಹೆಲ್ತ್ ಫಾರ್ ನೇಷನ್ ಸಂದೇಶದೊಂದಿಗೆ ಮುಕ್ತಾಯವಾಗುತ್ತದೆ.
ಚಿತ್ರದ ಕಲಾವಿದರಲ್ಲಿ ಆಟೋ ನಾಗರಾಜ್ (ಕಥಾನಾಯಕ ದಿನೇಶ್), ವ್ಯೋಮಿ ಸಾಕೆಲ್(ಚೈತ್ರ) (ವೈದ್ಯೆ-ಲಾಲಿತ್ಯ) ತಮ್ಮ ತಮ್ಮ ಪಾತ್ರಗಳ ವಿಶಿಷ್ಟ ಗುಣ ಲಕ್ಷಣಗಳಿಂದ ಪ್ರೇಕ್ಷಕರಿಗೂ ಇಷ್ಟವಾಗಿದ್ದು ಸಂವಾದದಲ್ಲಿ ಗೋಚರಿಸಿತು. ಕೆಲವು ವೈದ್ಯರು ಚಿತ್ರವನ್ನು ಪ್ರಶಂಸಿಸಿದ್ದು ಗಮನಾರ್ಹ. ಚಿತ್ರದ ಉಳಿದ ಪ್ರಮುಖ ಕಲಾವಿದರು ರಶ್ಮಿ, ಮನೋಜ್, ಬೇಬಿ ರಿಧಿ, ಹರೀಶ್ ಕುಂದೂರ್, ಪ್ರಮೀಳಾ ಸುಬ್ರಮಣ್ಯ, ಬಲರಾಜವಾಡಿ. ಛಾಯಾಗ್ರಾಹಕರು ರಾಜು ಹೆಮ್ಮಿಗೇಪುರ, ಹಿನ್ನೆಲೆ ಸಂಗೀತ ಅನಂತ್ ಆರ್ಯನ್. ಸಂಕಲನ: ದೀಪು ಸಿ.ಎಸ್. ನಿರ್ಮಾಣ ಪೂರ್ಣಚಂದ್ರ ಫಿಲಂಸ್. ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಸಿದ್ಧು ಪೂರ್ಣಚಂದ್ರ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.