ಧಾರವಾಡ : ಪ್ರಸಕ್ತ 2025 ನೇ ಸಾಲಿನ ಅಗಸ್ಟ್ ಮಾಹೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತಿಯಾದ ಮಳೆಯಾಗಿ ನವಲಗುಂದ, ಅಣ್ಣಿಗೇರಿ, ಕುಂದಗೋಳ, ಹುಬ್ಬಳ್ಳಿ, ಹುಬ್ಬಳ್ಳಿನಗರ ಹಾಗೂ ಧಾರವಾಡ ತಾಲೂಕುಗಳಲ್ಲಿ ಕಟಾವು ಹಂತದಲ್ಲಿದ್ದ ಹೆಸರು, ಉದ್ದು ಮತ್ತು ತೋಟಗಾರಿಕೆ ಬೆಳೆಗಳಾದ ಕೆಂಪು ಮೆಣಸಿನಕಾಯಿ, ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಳೆಗಳು ಹಾನಿಗೊಳಗಾಗಿರುತ್ತವೆ.
ಈ ಕುರಿತು ಎನ್.ಡಿ.ಆರ್.ಎಫ್ , ಎಸ್.ಡಿಆರ್.ಎಫ್ (NDRF / SDRF) ಮಾರ್ಗಸೂಚಿಯನ್ವಯ ಕಂದಾಯ, ಕೃಷಿ , ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ಕೈಗೊಂಡು ಒಟ್ಟಾರೆಯಾಗಿ 97629.64 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾದ ಬಗ್ಗೆ ಮಾನ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು,ಬೆಳೆ ನಷ್ಟವಾಗಿರುವ ರೈತರು ಪರಿಹಾರ ಧನ ಪಡೆಯಲು ಕಡ್ಡಾಯವಾಗಿ ಪ್ರೂಟ್ಸ್ (FRUITS) ತಂತ್ರಾಂಶದಲ್ಲಿ ನೋಂದಣಿ ಮಾಡಿಸಿ ಎಪ್.ಐ.ಡಿ (FID) ಸಂಖ್ಯೆಯನ್ನು ಹೊಂದಿರಬೇಕು ಹಾಗೂ ಎಪ್.ಐ.ಡಿ (FID) ಸಂಖ್ಯೆಯೊಂದಿಗೆ ರೈತರು ತಮ್ಮ ಹಕ್ಕಿನಲ್ಲಿರುವ ಎಲ್ಲಾ ಸಾಗುವಳಿ ಭೂಮಿಗಳ ವಿವರಗಳನ್ನು ಸೇರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಎಫ್.ಐ.ಡಿ (FID) ಹೊಂದಿರುವ ರೈತರ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ನೇರವಾಗಿ ರೈತರ ಬ್ಯಾಂಕ ಖಾತೆಗೆ ಡಿಬಿಟಿ (DBT) ಮುಖಾಂತರ ಪರಿಹಾರದ ಮೊತ್ತ ಜಮೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಬೆಳೆ ನಷ್ಟವಾಗಿರುವ ರೈತರು ಪರಿಹಾರದ ಧನ ಪಡೆಯಲು ಕಡ್ಡಾಯವಾಗಿ ಎಫ್.ಐ.ಡಿ (FID) ಯೊಂದಿಗೆ ತಾವು ಹೊಂದಿರುವ ಎಲ್ಲ ಸಾಗುವಳಿ ಜಮೀನುಗಳನ್ನು ಲಿಂಕ್ ಮಾಡಿಸಬೇಕು.
ಎಫ್.ಐ.ಡಿ (FID) ಯಡಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತ ಬಾಂಧವರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೇ ನಂಬರ ವಿಸ್ತೀರ್ಣಗಳನ್ನು ಕೂಡಲೇ ಪ್ರೂಟ್ಸ್ (Fruits) ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ರೈತರು ಎಫ್.ಐ.ಡಿ (FID) ಮಾಡಿಸಿಕೊಳ್ಳಲು ಆಧಾರ ಕಾರ್ಡ, ಬ್ಯಾಂಕ ಖಾತೆ ಪುಸ್ತಕದ ಪ್ರತಿ, ತಮ್ಮ ಹೆಸರಿನಲ್ಲಿರುವ ಎಲ್ಲ ಜಮೀನುಗಳ ಪಹಣಿ, ತಮ್ಮ ಮೋಬೈಲ್ ಸಂಖ್ಯೆ ಹಾಗೂ ಜಾತಿ ಪ್ರಮಾಣ ಪತ್ರದ ಪ್ರತಿಯೊಂದಿಗೆ ಕಂದಾಯ, ಕೃಷಿ , ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ, ಎಫ್.ಐ.ಡಿ (FID) ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.