ವಿಜಯನಗರ: ಹೊಸಪೇಟೆ ನಗರದ ಹೃದಯ ಭಾಗದಲ್ಲಿ ಬರುಲ್ಲವಾ ಕೋರ್ಟ್ ಮುಂಭಾಗದ ರಸ್ತೆಯ ಪ್ರದೇಶದಲ್ಲಿ ಮೊನ್ನೆ ದಿನಾಂಕ 13-09-2025 ರಂದು ಸಾಯಂಕಾಲ ನಡೆದ ರಸ್ತೆ ಅಪಘಾತದಲ್ಲಿ ಸ್ಥಳೀಯ ಯಜಮಾನರಾದ ತಿಮಪ್ಪ ರವರು ಮೃತಪಟ್ಟಿರುವ ದುರ್ಘಟನೆ ನಗರವಾಸಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ. ಈ ಘಟನೆಯು ಪ್ರದೇಶದಲ್ಲಿ ದುಃಖದ ವಾತಾವರಣ ನಿರ್ಮಾಣ ಮಾಡಿದ್ದೇ ಅಲ್ಲದೆ, ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಆ ರಸ್ತೆಗಳಲ್ಲಿ ಬಹುಕಾಲದಿಂದಲೇ ವೇಗ ತಡೆಗೋಡೆಗಳ ಕೊರತೆ ಇದೆ. ನಿರಂತರವಾಗಿ ವಾಹನಗಳು ಅತಿವೇಗದಲ್ಲಿ ಸಂಚರಿಸುತ್ತಿದ್ದು, ಸಂಚಾರ ನಿಯಂತ್ರಣ ಕ್ರಮಗಳಿಲ್ಲದ ಕಾರಣ ಪಾದಚಾರಿಗಳಿಗೆ ರಸ್ತೆ ದಾಟುವುದು ಜೀವ ಬೆಲೆ ಕಟ್ಟುವಂತಾಗಿದೆ. ಸಾರ್ವಜನಿಕರು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಕ್ರಮಕೈಗೊಳ್ಳದಿರುವುದರಿಂದ ಆಕ್ರೋಶ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತುರ್ತು ಮನವಿ ಪತ್ರವನ್ನು ಹೊಸಪೇಟೆ ಶಾಸಕರಾದ ಹೆಚ್ ಆರ್ ಗವಿಯಪ್ಪ ರವರಿಗೆ ಸಲ್ಲಿಸಲಾಗಿದ್ದು, ತಕ್ಷಣವೇ ರಸ್ತೆಗಳಲ್ಲಿ ವೇಗ ತಡೆಗೋಡೆಗಳನ್ನು ನಿರ್ಮಿಸುವಂತೆ, ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸುವಂತೆ ಹಾಗೂ ಪೊಲೀಸ್ ಪೆಟ್ರೋಲ್ ಹೆಚ್ಚಿಸುವಂತೆ ಆಗ್ರಹಿಸಲಾಗಿದೆ. ವೇದಿಕೆಯ ನಾಯಕರು ಹೇಳುವಂತೆ,
“ತಿಮಪ್ಪರವರ ದುರ್ಮರಣವು ಕೇವಲ ಒಂದು ಕುಟುಂಬವನ್ನೇ ಅಲ್ಲ, ಇಡೀ ಸಮುದಾಯವನ್ನೇ ಶೋಕಾಚ್ಛಾದಿತಗೊಳಿಸಿದೆ. ಇದು ಕೇವಲ ಒಂದು ಅಪಘಾತವಲ್ಲ, ಸಾರ್ವಜನಿಕರ ಜೀವ ರಕ್ಷಣೆಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಎಚ್ಚರಿಕೆಯ ಗಂಟೆ,” ಎಂದು ಒತ್ತಿ ಹೇಳಿದರು.
ಅಲ್ಲದೆ, ಸ್ಥಳೀಯರು ರಸ್ತೆಗಳ ದುರಸ್ತಿ, ಸೂಕ್ತ ಬೆಳಕಿನ ವ್ಯವಸ್ಥೆ ಹಾಗೂ ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೂ ಒತ್ತಾಯ ವ್ಯಕ್ತಪಡಿಸಿದ್ದು, ನಗರದಲ್ಲಿ ಇಂತಹ ದುರ್ಘಟನೆಗಳು ಪುನರಾವರ್ತನೆ ಆಗದಂತೆ ತ್ವರಿತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರು ಮಾತನಾಡುತ್ತ ನಿಮ್ಮ ಮನವಿಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಮುಂದಿನ ಕೆಲವೇ ದಿನಗಳಲ್ಲಿ ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.