ಹಸಿರು ಕ್ರಾಂತಿ ವರದಿ: ಜಮಖಂಡಿ: ಎಂಆರ್ಎನ್(ನಿರಾಣಿ) ಫೌಂಡೇಷನ್ನ ಶೈಕ್ಷಣಿಕ ದತ್ತು ಯೋಜನೆ ಅಡಿಯಲ್ಲಿ ಪ್ರತಿ ವರ್ಷ ಪಂಚಮಸಾಲಿ ಸಮಾಜದ ಬಡ ಹಾಗೂ ಪ್ರತಿಭಾವಂತ ಮಕ್ಕಳನ್ನು ದತ್ತು ಪಡೆದು ೮ನೇ ತರಗತಿಯಿಂದ ಪದವಿ ವರೆಗಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಫೌಂಡೇಷನ್ ವತಿಯಿಂದ ಭರಿಸಲಾಗುವುದು ಎಂದು ನಿರಾಣಿ ಉದ್ಯಮ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.
ಇಲ್ಲಿನ ಮೈಗೂರ ರಸ್ತೆಯ ಕಡಪಟ್ಟಿ ಕ್ರಾಸ್ನಲ್ಲಿರುವ ಪಂಚಮಸಾಲಿ ಸಮುದಾಯ ಭವನದಲ್ಲಿ ಪಂಚಮಸಾಲಿ ಸಮಾಜ ಸಂಘದ ತಾಲ್ಲೂಕು ಘಟಕ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂಚಮಸಾಲಿ ಸಮಾಜದವರು ಸರ್ಕಾರದ ಹಿರಿಯ ಅಧಿಕಾರಿಗಳು, ಉದ್ಯಮಿದಾರರು, ವ್ಯಾಪಾರಸ್ಥರು, ರೈತರು, ಆಧ್ಯಾತ್ಮಿಕ ಮತ್ತು ಧಾರ್ಮಿಕ ಗುರುಗಳು ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದಲ್ಲಿ ಶ್ರೀಮಂತರು ಹಾಗೂ ಅಷ್ಟೇ ಬಡವರು ಸಹ ಇದ್ದಾರೆ. ಆದರೆ, ಎಷ್ಟೇ ಬಡತನವಿದ್ದರೂ ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಡುವವರಲ್ಲ ಎಂದರು.
ಕೃಷಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಪಂಚಮಸಾಲಿ ಸಮಾಜದ ಹಿರಿಯರ ಕೊಡುಗೆ ಬಹಳವಿದೆ. ಸುಮಾರು ೫೦ ವರ್ಷಗಳ ಹಿಂದೆ ಶಿಕ್ಷಣ ಕೊಡಿಸಿದವರು ನಮ್ಮ ಹಿರಿಯರು. ಜಮಖಂಡಿ ಭಾಗ ಶ್ರೀಮಂತವಾಗಲು ಹಿಡಕಲ್ ಜಲಾಶಯ ಕಾರಣ. ಅದರ ನಿರ್ಮಾಣಕ್ಕೆ ಬಾಳೇಕುಂದ್ರಿ ಅವರು ಕಾರಣ. ಅವರನ್ನು ಸದಾಕಾಲ ಸ್ಮರಿಸಬೇಕು. ಪಂಚಮಸಾಲಿಗರು ಅತ್ಯಂತ ಸೌಮ್ಯವಾದಿಗಳೂ ಹೌದು. ಆದರೆ, ಪ್ರಸಂಗ ಮತ್ತು ಅವಕಾಶ ಬಂದರೆ ಖಡ್ಗ್ ಹಿಡಿಯಲು ಕೂಡ ಸಿದ್ಧ ಎಂದರು.
ನಿವೃತ್ತ ಎಸ್ಪಿ ಎಂ.ಬಿ. ಸಂಕದ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಜಮಖಂಡಿಯಲ್ಲಿ ಸಿಪಿಐ ಆಗಿ ೧೬ ವರ್ಷಗಳ ಹಿಂದೆ ಸೇವೆ ಸಲ್ಲಿಸಿದ್ದೆ. ಅದು ನಾನು ಒಂದೆಡೆ ಸೇವೆ ಸಲ್ಲಿಸಿದ ಗರಿಷ್ಠ ಅವಧಿಯಾಗಿದೆ. ಜಮಖಂಡಿಗೂ ನಗೂ ಅವಿನಾಭಾವ ಸಂಬAಧವಿದೆ. ಜಮಖಂಡಿಯನ್ನು ನನ್ನ ಕರ್ಮಭೂಮಿ ಎಂದು ಭಾವಿಸುತ್ತೇನೆ ಎಂದರು.
ಪಂಚಮಸಾಲಿ ಸಮಾಜ ಸಂಘದ ಜಮಖಂಡಿ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎನ್. ಪಾಟೀಲ ಮಾತನಾಡಿ, ಪಂಚಮಸಾಲಿ ಸಮುದಾಯ ಭವನದ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲು ನಿರಾಣಿ ಕುಟುಂಬ ಕೊಡುಗೆ ಅಪಾರವಾಗಿದೆ. ಬಡ ಹಾಗೂ ಪ್ರತಿಭಾವಂತ ಮಕ್ಕಳ ಶೈಕ್ಷಣಿಕ ದತ್ತು ಪಡೆಯುವ ಎಂಆರ್ಎನ್(ನಿರಾಣಿ) ಫೌಂಡೇಷನ್ನ ಕಾರ್ಯ ಶ್ಲಾಘನೀಯ ಎಂದರು.
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧನೆಗೈದ ಸಾಧಕರ ಸನ್ಮಾನವನ್ನು ನೆರವೇರಿಸಲಾಯಿತು.
ಆಲಗೂರಿನ ಧರಿದೇವರ ಮಠದ ಲಕ್ಷö್ಮಣ ಮುತ್ಯಾ, ಕುಂಚನೂರ-ಜಕನೂರಿನ ಸಿದ್ದಲಿಂಗೇಶ್ವರ ಕಮರಿಮಠದ ಸಿದ್ದಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ಧುರೀಣ ಭೀಮಸಿ ಮಗದುಮ, ಬಸವರಾಜ ದಲಾಲ, ಪಿ.ಎಂ. ಝುಲಪಿ, ಪ್ರಭು ಜನವಾಡ, ಸಂಗಮೇಶ ಕೌಜಲಗಿ, ಶಶಿಕಲಾ ಬಿರಾದಾರ, ಜಯಶ್ರೀ ಬಾಡಗಿ, ಸುನಿತಾ ಬಳಗಾರ, ಬಸವರಾಜ ಬಳಗಾರ, ಮಹಾಂತೇಶ ನರಸನಗೌಡ್ರ, ಗುತ್ತಿಗೆದಾರ ಸುನಿಲ ಕಡಪಟ್ಟಿ ತ್ತಿತರರು ಇದ್ದರು.
ಜಿ.ಜಿ. ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು. ಈಶ್ವರ ನ್ಯಾಮಗೌಡ ರೈತ ಗೀತೆ ಹಾಡಿದರು. ನಿವೃತ್ತ ಉಪನ್ಯಾಸಕಿ ವಿಮಲಾ ಕುಬಕಡ್ಡಿ, ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ ಮನಗೂಳಿ, ನಿವೃತ್ತ ಬಿಇಒ ಸಿ.ಎಂ. ನೇಮಗೌಡ ನಿರೂಪಿಸಿದರು.