ಬಳ್ಳಾರಿ ಸೆ 14. ಇತ್ತೀಚೆಗೆ ಲಂಡನ್ ಪ್ರವಾಸ ಕೈಗೊಂಡ ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವರು ರಾಜ್ಯದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಅವಕಾಶ ಕಲ್ಪಿಸುವುದಾಗಿ ಮತ್ತು ಇದರಿಂದ ರಾಜ್ಯದ ಶೈಕ್ಷಣಿಕ ಗುಣಮಟ್ಟ ವೃದ್ಧಿಸುವುದು ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯಗಳು ಅಧ್ಯಾಪಕರು ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರದ ಈ ನಡೆಯು ಹಾಸ್ಯಾಸ್ಪದವಾಗಿದೆ. ಸರ್ಕಾರದ ಈ ನಡೆಯನ್ನು ಎಐಡಿಎಸ್ಓ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ಪ್ರಸ್ತುತ ಸರ್ಕಾರಿ ಶುಲ್ಕಗಳನ್ನು ಭರಿಸಲು ಸಾಧ್ಯವಾಗದೇ ಗಣನೀಯ ಪ್ರಮಾಣದ ಬಡ ವಿದ್ಯಾರ್ಥಿಗಳು ಉನ್ನತ ಶೈಕ್ಷಣಿಕದಿಂದ ದೂರ ತಳ್ಳಲ್ಪಡುತ್ತಿದ್ದಾರೆ. ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಕರ್ನಾಟಕ ಸರ್ಕಾರವು ನೇಮಿಸಿದ್ದ ಎಸ್ಇಪಿ ಆಯೋಗವು ಕೂಡ ವಿದೇಶಿ ವಿಶ್ವವಿದ್ಯಾಲಯಗಳಿಗೆ ಅವಕಾಶ ನೀಡಬಾರದು ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಅದಾಗಿಯೂ ಸರ್ಕಾರವು ತನ್ನ ಅಜೆಂಡಾದೊಂದಿಗೆ ಮುಂದುವರೆಯುತ್ತಿರುವಾಗ, ಎಸ್ಇಪಿ ನಿಯೋಗವನ್ನು ಏಕೆ ರಚಿಸಲಾಯಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ರಾಜ್ಯ ಸರ್ಕಾರವು ವಿದೇಶಿ ವಿಶ್ವವಿದ್ಯಾಲಯಗಳಿಗೆ ಮಣೆ ಹಾಕಿರುವುದು ನಾಡಿನ ಜನತೆಗೆ ಮಾಡುತ್ತಿರುವ ನಂಬಿಕೆದ್ರೋಹವಾಗಿದೆ. ಇದು ಶಿಕ್ಷಣದಲ್ಲಿ ಅನಾರೋಗ್ಯಕರ ಸ್ಪರ್ಧೆ ಮತ್ತು ಶಿಕ್ಷಣದ ಸಂಪೂರ್ಣ ವ್ಯಾಪಾರಿಕರಣಕ್ಕೆ ದಾರಿ ಮಾಡುತ್ತದೆ.
ಸರ್ಕಾರವು ವಿದೇಶಿ ವಿಶ್ವವಿದ್ಯಾಲಯಗಳಿಗೆ ಅವಕಾಶ ಕಲ್ಪಿಸುವ ತನ್ನ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಮತ್ತು ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಹಾಗೂ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರವನ್ನು ಎಐಡಿಎಸ್ಓ ಆಗ್ರಹಿಸುತ್ತದೆ.