ಐಜ್ವಾಲ್ (ಮಣಿಪುರ): ಮಿಜೋರಾಂನ ಮೊದಲ ರೈಲು ಮಾರ್ಗವಾದ ಬೈರಾಬಿ-ಸೈರಾಂಗ್ ಎಕ್ಸ್ಪ್ರೆಸ್ ಅನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.
ರೈಲ್ವೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಮಾರ್ಗವು ಜನರಿಗೆ ಉತ್ತಮ ಸೇವೆಗಳನ್ನು ಪಡೆಯಲು ಮತ್ತು ಸ್ಥಳೀಯ ವ್ಯವಹಾರಗಳಿಗೆ ದೇಶದ ಉಳಿದ ಭಾಗಗಳಿಗೆ ಪ್ರವೇಶವನ್ನು ಪಡೆಯಲು ಸಹಾಯ ಮಾಡಲಿದ್ದು, ಇದು ಪರಿವರ್ತನೆಯ ಜೀವನಾಡಿಯಾಗಲಿದೆ ಎಂದರು.
ಇದು ಕೇವಲ ರೈಲ್ವೆ ಸಂಪರ್ಕವಲ್ಲ. ಇದು ಸಾರಿಗೆಯ ಜೀವನಾಡಿಯಾಗಿದೆ. ಇದು ಮಿಜೋರಾಂ ಜನರ ಜೀವನೋಪಾಯ ಮತ್ತು ಜೀವನವನ್ನು ಕ್ರಾಂತಿಕಾರಗೊಳಿಸಲಿದೆ. ಮಿಜೋರಾಂ ರೈತರು ಮತ್ತು ಉದ್ಯಮಿಗಳಿಗೆ ದೇಶದೆಲ್ಲೆಡೆ ಮಾರುಕಟ್ಟೆ ತಲುಪಬಹುದಾಗಿದೆ ಎಂದು ಹೇಳಿದರು.
ಪ್ರತಿಕೂಲ ಹವಾಮಾನದ ಕಾರಣ ಲೆಂಗ್ಪುಯಿ ವಿಮಾನ ನಿಲ್ದಾಣದಿಂದಲೇ ಐಜ್ವಾಲ್ನಲ್ಲಿ ಆಯೋಜಿಸಲಾಗಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉದ್ಘಾಟನಾ ಸ್ಥಳದಲ್ಲಿ ಆಗಮಿಸಲು ಸಾಧ್ಯವಾಗದ್ದಕ್ಕೆ ಜನರ ಕ್ಷಮೆಯಾಚಿಸಿದರು. ಇಲ್ಲಿನ ಸುಂದರ ಭೂಮಿ ಮತ್ತು ನೀಲಿ ಬೆಟ್ಟಗಳನ್ನು ವೀಕ್ಷಿಸುತ್ತಿರುವ ಪಥನಿಯಾ ದೇವರಿಗೆ ನಮಿಸುವುದಾಗಿ ತಿಳಿಸಿ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ನಾನು ಇಂದು ಐಜ್ವಾಲ ಸಮಾವೇಶದಲ್ಲಿ ಇರಲು ಸಾಧ್ಯವಾಗದೇ ಇದ್ದರೂ ಅಲ್ಲಿನ ಜನರ ಪ್ರೀತಿ ಮತ್ತು ಕಾಳಜಿಯನ್ನು ನಾನು ಅರಿಯಬಲ್ಲೆ ಎಂದರು.