ಗದಗ: ಅಂಚೆ ಇಲಾಖೆ ತನ್ನ ಮೂಲ ಉದ್ಯಮ ಸೇವೆ ವಿಸ್ತರಿಸಿ ಮಹಾ ಉದ್ಯಮ ಸಪ್ತಾಹವನ್ನು ಗದಗ ವಿಭಾಗೀಯದಲ್ಲಿ ಸೆ.15 ರಿಂದ 20 ವರಿಗೆ ವಿಶೇಷ ಅಂಚೆ ಮಹಾ ಉದ್ಯಮ ಸಪ್ತಾಹ ಆಯೋಜಿಸಲಾಗಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಹೇಳಿದರು.
ಗದಗ ಪ್ರಧಾನ ಅಂಚೆ ಕಚೇರಿಯಲ್ಲಿ ಬುಧವಾರ ನಡೆದ ಮಹಾ ಉದ್ಯಮ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಅಭಿಯಾನದಲ್ಲಿ ಜಿಲ್ಲೆಯ ಬ್ಯಾಂಕಿಂಗ್, ಗುಡಿ ಕೈಗಾರಿಕೆ, ಸಣ್ಣ ಉದ್ಯಮ, ಹಣುಕಾಸು ಸಂಸ್ಥೆಗಳು, ಸರಕಾರ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ವಿವಿಧ ಉತ್ಪನ್ನಗಳಿಗೆ, ಇ-ಕಾಮಸ್ ಮಾರಾಟಗಾರರು ಸೇರಿದಂತೆ ಸಾಮಾನ್ಯ ಗ್ರಾಹಕವರಿಗೂ ವಿವಿಧ ಅಂಚೆ ಸೇವೆ ಪರಿಚಯಿಲಾಗುತ್ತಿದೆ ಎಂದರು.
ಸಪ್ತಾಹದ ವೇಳೆಯಲ್ಲಿ ಗ್ರಾಹಕರಿಗೆ ಸ್ಪೀಡ್ ಪೋಸ್ಟ, ಪಾರ್ಸೆಲ್, ಸಿಓಡಿ (COD) ಸೇವೆಗಳ ಪ್ರಚಾರದ ಜೊತೆಗೆ ಹೊಸ ಗ್ರಾಹಕರನ್ನು ಅಂಚೆ ಇಲಾಖೆಯ ವ್ಯಾಪ್ತಿಗೆ ತರಲಾಗುತ್ತದೆ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳೊಂದಿಗೆ ಹೊಸ ಒಪ್ಪಂದ ಮೂಲಕ ಸ್ಥಳೀಯ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗೂ ತಲುಪಿಸುವ ಅವಕಾಶ ಬಗೆಗೆ ಗ್ರಾಹಕರಿಗೆ ತಿಳುವಳಿಕೆ ಮೂಡಿಸಿ, ಅವಕಾಶ ಕಲ್ಪಿಸಲಾಗುತ್ತದೆ. ವರ್ಷದ 12 ತಿಂಗಳ ಕಾಲವೂ ದೇಶದ ಕಟ್ಟಕಡೆಯ ವ್ಯಕ್ತಿಗೂ ಅಂಚೆ ಸೇವೆ ನೀಡುವ ಉನ್ನತ ತಂತ್ರಜ್ಞಾನದ ಜೊತೆಗೆ ಅಪಾರ ಪ್ರಮಾಣದ ಮಾನವ ಸಂಪನ್ಮೂಲ, ಅತ್ಯಂತ ದೊಡ್ಡದಾದ ಸಂಪರ್ಕ ಜಾಲ ಅಂಚೆ ಇಲಾಖೆ ಹೊಂದಿದೆ. ಇದು ಗ್ರಾಹಕರ ಸ್ನೇಹಿಯಾಗಿ ಖಾಸಗಿ ಸಂಸ್ಥೆಗಳಿಂದ ದೊರೆಯದ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಾರಸ್ಥರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಪಡೆಯಲು ಸಹಕಾರಿಯಾಗಿದೆ ಎಂದರು.
ಗದಗ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ ಜಾಧವ ಮಾತನಾಡಿ, ಈ ಅಭಿಯಾನದಿಂದ ಗ್ರಾಹಕರು ಹಲವು ರೀತಿಯ ಪ್ರಯೋಜನಗಳನ್ನು ಪಡೆಯುತ್ತಾರೆ. ದಾಖಲೆಗಳು, ಪಾರ್ಸೆಲ್ ಗಳು ವೇಗವಾಗಿ ವಿಶ್ವಾಸಾರ್ಹವಾಗಿ ನಂಬಿಕೆಯೊಂದಿಗೆ ಗ್ರಾಹಕರ ನಿರೀಕ್ಷೆ ತಕ್ಕಂತ ಸೇವೆ ನೀಡುವದರಿಂದಾಗಿ ಗ್ರಾಹಕರು ತಮ್ಮ ದಿನನಿತ್ಯದ ಅಗತ್ಯಗಳಿಗೆ ಅಂಚೆ ಇಲಾಖೆ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ರೋಣ ಉಪ ವಿಭಾಗದ ಸಹಾಯಕ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ ಪ್ರಾಸ್ತವಿಕವಾಗಿ ಮಾತನಾಡಿ, ಸ್ಣಳೀಯ ವಿವಿಧ ಉತ್ಪನ್ನಗಳಿಗೆ ದೇಶದ ಎಲ್ಲೆಡೆ ಮಾರುಕಟ್ಟೆ ತಲುಪಲು ಸುಲಭವಾಗಿಸಲಿದೆ. ಸರ್ಕಾರಿ ಮತ್ತು ಖಾಸಗಿ ಸಂಘ ಸಂಸ್ಥೆಗಳಿಗೆ ತ್ವರಿತ ಮತ್ತು ತಂತ್ರಜ್ಞಾನ ಆಧಾರಿತದಲ್ಲಿಯೇ ವಿವಿಧ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಗ್ರಾಹಕರು ಈ ಅಂಚೆ ಮಹಾ ಉದ್ಯಮ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಂಚೆ ಇಲಾಖೆ ಗದಗ ಮಾರುಕಟ್ಟೆ ವ್ಯವಸ್ಥಾಪಕ ವೆಂಕಟೇಶ ಆಕಳವಾಡಿ ಮಾತನಾಡಿ, ಅಂಚೆ ಇಲಾಖೆಯ ಮನೆ ಬಾಗಿಲಿಗೆ ಬಂದು ಪಾರ್ಸಲ್, ಸ್ಪೀಡ್ ಪೋಸ್ಟ ಬುಕ್ಕಿಂಗ್ ಜೊತೆಗೆ ವ್ಯಾಪಾರ ವಹಿವಾಟು ಉತ್ತೇಜನ ಕಲ್ಪಿಸುವ ಸಲುವಾಗಿ ಕಡಿಮೆ ಸೇವಾ ಶುಲ್ಕದಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವ್ಯವಹಾರಕ್ಕೆ ವಿವಿಧ ಸೇವೆ ನೀಡಲಾಗುತ್ತದೆ. ಗ್ರಾಹಕರು ಈ ಸೇವೆಗಳ ಸದ್ಭಳಕೆಗೆ ಮಾಡಿಕೊಳ್ಳಬೇಕು ಎಂದರು.
ಪ್ರಧಾನ ಅಂಚೆ ಪಾಲಕರಾದ ಮಂಜುಳಾ ದೇಗಿನಾಳ ಅಧ್ಯಕ್ಷತೆವಹಿಸಿ ಮಾತನಾಡಿದರು.
ಗದಗ ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕ ವಿ.ಸುನೀಲಕುಮಾರ ಮತ್ತಿತರು ಪಾಲ್ಗೊಂಡಿದ್ದರು. ನಿಂಗಪ್ಪ ಹೂಗಾರ ನಿರೂಪಿಸಿ, ವಂದಿಸಿದರು. ಗದಗ -ಬೆಟಗೇರಿ, ಗದಗ ನಗರ, ಗದಗ, ರೋಣ ಉಪ ವಿಭಾಗದ ಸಿಬ್ಬಂದಿ ಪಾಲ್ಗೊಂಡಿದ್ದರು.