ಬೆಂಗಳೂರು: ಶಾಸಕ ವೀರೇಂದ್ರ ಅವರೊಂದಿಗಿನ ಉದ್ಯಮದಲ್ಲಿ ವಕೀಲ ಅನಿಲ್ ಗೌಡ ಪಾಲುದಾರರಾಗಿದ್ದಾರೆ. ಅವರ ವ್ಯವಹಾರದಿಂದ ಲಾಭ ಮಾಡಿಕೊಂಡಿರುವ ಕುರಿತು ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೈಕೋರ್ಟ್ಗೆ ತಿಳಿಸಿದೆ.
ವೀರೇಂದ್ರ ಬಂಧನದ ಬಳಿಕ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಪ್ರಶ್ನಿಸಿ ವಕೀಲ ಅನಿಲ್ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕ ಸದಸ್ಯ ಪೀಠಕ್ಕೆ ಕೇಂದ್ರ ಸರ್ಕಾರದ ಪರ ವಕೀಲರು ವಿವರ ನೀಡಿದರು.
ದುಬೈ ಸರ್ಕಾರ ಕ್ಯಾಸಲ್ ರಾಕ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಎಂಬ ಸಂಸ್ಥೆಗೆ ವಾಣಿಜ್ಯ ಪರವಾನಗಿ ನೀಡಿದೆ. ಈ ಕಂಪನಿಯಲ್ಲಿ ಅನಿಲ್ ಗೌಡ ಮ್ಯಾನೇಜರ್ ಎಂದು ಉಲ್ಲೇಖಿಸಲಾಗಿದೆ. ಇಲ್ಲಿ ಐದನೇ ಹೆಸರು ಪ್ರಮುಖ ಆರೋಪಿಯಾಗಿರುವ ಶಾಸಕ ವೀರೇಂದ್ರ ಪಪ್ಪಿ ಅವರದ್ದು ಎಂದು ಪೀಠಕ್ಕೆ ವಿವರಿಸಿದರು.