ಧಾರವಾಡ ದೇಶದ ಅಭಿವೃದ್ಧಿಗೆ ಅಗತ್ಯವಿರುವ ನೈಸರ್ಗಿ ಸಂಪನ್ಮೂಲಗಳು ಮತ್ತು ದೇಶದ ನಾಗರಿಕರಿಗೆ ಉತ್ತಮ ಆರೋಗ್ಯ, ಜೀವನ ಲಭಿಸಲು ಅರಣ್ಯ ಸಂಪತ್ತು ಮುಖ್ಯವಾಗಿದೆ. ವನ್ಯಜೀವಿಗಳ ಅರಣ್ಯ ಅಸರೆ ಆಗಿದೆ. ಇದರ ರಕ್ಷಣೆ ಮಾಡುವುದು ಬರೀ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ, ದೇಶದ ಎಲ್ಲ ನಾಗರಿಕರಿಗೂ ಅರಣ್ಯ ರಕ್ಷಣೆ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ಹೇಳಿದರು.
ಕರ್ನಾಟಕ ಅರಣ್ಯ ಇಲಾಖೆ ಧಾರವಾಡ ವೃತ್ತದ ಧಾರವಾಡ ಅರಣ್ಯ ಸಂಕೀರ್ಣ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.
ವನ್ಯಜೀವಿಗಳ ಸಂರಕ್ಷಣೆ, ಅರಣ್ಯ ರಕ್ಷಣೆಗೆ ಎಲ್ಲರೂ ಬದ್ಧರಾಗಿರಬೇಕು. ಉತ್ತಮ ಗಾಳಿ, ನೀರು, ಫಲವತ್ತಾದ ಮಣ್ಣು ಸಿಗಲು ನಾವು ಗಿಡಮರಗಳನ್ನು, ಪ್ರಾಣಿ, ಪಕ್ಷಿಗಳನ್ನು ಕಾಪಾಡಬೇಕು ಎಂದರು.
ಹುತಾತ್ಮರ ದಿನ ಸ್ಮರಣೀಯವಾದ್ದು, ಹುತಾತ್ಮರ ತ್ಯಾಗ ಬಲಿದಾನಗಳನ್ನು ನಾವು ಗೌರವಿಸಬೇಕು. ಅವರ ಕುಟುಂಬ ಸದಸ್ಯರೊಂದಿಗೆ ನಾವು ಇರಬೇಕು ಎಂದರು.
ಕಳೆದ 60 ವರ್ಷಗಳಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯನಿರತ ವಿವಿಧ ಹಂತದ ಸುಮಾರು 62 ಜನ ಅಧಿಕಾರಿ, ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಅವರಿಗೆ ನನ್ನ ಗೌರವಪೂರ್ವಕ ವಂದನೆಗಳು ಎಂದು ಪಿಡಿಜೆ ಬಿ.ಎಸ್.ಭಾರತಿ ಅವರು ತಿಳಿಸಿದರು.
ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಅರಣ್ಯಾಧಿಕಾರಿ ಕಿರಣಕುಮಾರ ಕರತಂಗಿ ಅವರು ಹುತಾತ್ಮರ ವಿವರ ವಾಚಿಸಿ, ಅವರ ಸೇವೆ ಸ್ಮರಿಸಿದರು.
ಶಿಕ್ಷಕಿ ಮೀನಾಕ್ಷಿ ಹಿರೇಮಠ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲೀಸ ವರಿಷ್ಟಾಧಿಕಾರಿ ಗುಂಜನ್ ಆರ್ಯ, ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಬಿ.ಮಂಜುನಾಥ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪಿ.ಎಸ್.ವರೂರ, ಅಶೋಕ ಗೊಂಡೆ, ಡಾ.ಶಿವಕುಮಾರ, ಸುರೇಶ ತೇಲಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್.ಎಂ.ಹಿರೇಮಠ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಎಚ್.ಪರಿಮಳಾ, ಅರಣ್ಯ ವ್ಯವಸ್ಥಾಪನಾಧಿಕಾರಿ ಎ.ಎ.ಇಳಕಲ್ಲ ಹಾಗೂ ಅರಣ್ಯ ಇಲಾಖೆ ವಿವಿಧ ವೃಂದಗಳ ಪರವಾಗಿ ಇ.ಕೆ.ಗಣೇಶ್ವರ, ವಿನೋದಕುಮಾರ, ಆಶಾಲತಾ ಶಟ್ಟಿ, ಶ್ರೀಶೈಲ ಕಿತ್ತೂರ, ಶಿವಪ್ರಸಾದ, ಬಸಪ್ಪ ಕರಡಿ, ದಕ್ಷೀತ ರವಿ ರಾಠೋಡ, ವಿ.ಡಿ.ಲಮಾಣಿ, ರಮೇಶ ಕೊಲ್ಕರ, ಎಂ.ಸಿ.ಕಮ್ಮಾರ ಅವರು ಕರ್ನಾಟಕ ಅರಣ್ಯ ಹುತಾತ್ಮರ ಸ್ತೂಪಕ್ಕೆ ರೀತ-ಗೌರವ ಪುಷ್ಪಗುಚ್ಚ ಸಮರ್ಪಣೆ ಮಾಡಿದರು.
ಪೋಲೀಸ ಸಿಬ್ಬಂದಿಯಿಂದ ಹುತಾತ್ಮರ ಗೌರವ ಸೂಚಕವಾಗಿ ಮೂರು ಸುತ್ತು ಗುಂಡು ಹಾರಿಸಿ, ಗೌರವ ಸೂಚಿಸಿದರು. ನಂತರ ಎರಡು ನಿಮಿಷ ಮೌನ ಆಚರಿಸಲಾಯಿತು. ಪರೇಡ್ ಕಮಾಂಡರ್ ಅವರ ನೇತೃತ್ವದಲ್ಲಿ ಪೋಲೀಸ ಪಡೆ, ವಾದ್ಯವೃಂದ ಗೌರವ ಸಲ್ಲಿಸಿತು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಹುತಾತ್ಮರ ಕುಟುಂಬ ಸದಸ್ಯರು ಭಾಗವಹಿಸಿದ್ದರು.