ಹಸಿರು ಕ್ರಾಂತಿ ವರದಿಜಮಖಂಡಿ. ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಲ್ಲಿ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದೆ. ವಿದ್ಯಾರ್ಥಿಗಳ ಪಾಲಿನ ಮಾರ್ಗದರ್ಶಕರಾಗಿ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಶಿಕ್ಷಕ ಸಂಗನಬಸವ ಉಟಗಿ ಹೇಳಿದರು.
ಅವರು ಸಮೀಪದ ಕುಂಬಾರ ಹಳ್ಳ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳು ಉತ್ತಮವಾದ ನಡತೆಯನ್ನು ಹೊಂದಿ ಏಕಾಗ್ರತೆಯಿಂದ ಓದಿದರೆ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು. ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿದ್ದು ಪುಸ್ತಕದ ಕಡೆ ಹೆಚ್ಚು ಗಮನಹರಿಸಿ ಹೆಚ್ಚು ಅಂಕಗಳನ್ನು ಗಳಿಸಲು ಪ್ರಯತ್ನಿಸಬೇಕು ಆಗ ಮಾತ್ರ ತಂದೆ ತಾಯಿಗಳ ಹಾಗೂ ಶಿಕ್ಷಕರಿಗೆ ನೀವು ಕೊಡುವ ದೊಡ್ಡ ಬಹುಮಾನವಾಗಿದೆ ಎಂದು ಹೇಳಿದರು.
ದೈಹಿಕ ಶಿಕ್ಷಕ ಬಾಹುಬಲಿ ಮುತ್ತೂರ ಮಾತನಾಡಿ ವಿದ್ಯಾರ್ಥಿಗಳು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಎಲ್ಲರೊಂದಿಗೆ ಬೆರೆತು ಚೆನ್ನಾಗಿ ಓದಿದಲ್ಲಿ ಮಾತ್ರ ಸಮಾಜದಲ್ಲಿ ಗೌರವಯುತವಾಗಿ ಬದುಕಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಹಿರಿಯ ಶಿಕ್ಷಕ ಸಂಜೀವ್ ಝಂಬುರೆ, ಶಿಕ್ಷಕಿ ಶಕುಂತಲಾ ಬಿರಾದಾರ, ಸವಿತಾ ಬೆನಕಟ್ಟಿ ಮಾತನಾಡಿದರು.
ಶಾಲೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಶಿಕ್ಷಕರಿಗೆ ವಿವಿಧ ಬಗೆಯ ಆಟಗಳನ್ನು ಆಡಿಸಿ ಬಹುಮಾನವನ್ನು ವಿತರಿಸಿದರು.
ಶಿಕ್ಷಕ ದಿನಾಚರಣೆಯ ಕುರಿತು ವಿದ್ಯಾರ್ಥಿಗಳಾದ ಪೂಜಾ ಚಿಗರಿ, ಶೈಹೀನಾ ಬೇಗಂ ನದಾಫ್, ಸಹನಾ ಕಡಪಟ್ಟಿ, ಚೈತ್ರ ತೇರದಾಳ, ವೀರೇಶ್ ಸೊನ್ನದ್, ಶ್ರೀಶೈಲ್ ಮಾಳಿ, ಧನಶ್ರೀ ಬೀಳಗಿ, ಪೂಜಾ ಜಕನೂರ್, ಸುಧಾ ದಡ್ಡಿಮನಿ, ರೇಷ್ಮಾ ನದಾಫ್ ಮುಂತಾದ ವಿದ್ಯಾರ್ಥಿಗಳು ಶಿಕ್ಷಕರ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚಂದ್ರಕಾಂತ ಪೊಲೀಸ್, ಆಶಿಫಾ ಭಾನು ಮೋಮಿನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಮಾರಿ ಸನ್ಮತಿ ಶಿರಹಟ್ಟಿ ನಡೆಸಿಕೊಟ್ಟರು. ಕುಮಾರಿ ನಿಂಗವ್ವ ಮರನೂರ ಸ್ವಾಗತಿಸಿದಳು. ಕುಮಾರ ಸಾಗರ್ ಕುರಣಿ ವಂದಿಸಿದನು.