ನವದೆಹಲಿ, ಸೆಪ್ಟೆಂಬರ್ 11: ದೆಹಲಿ ಪೊಲೀಸರ ವಿಶೇಷ ಘಟಕವು ದೆಹಲಿಯಲ್ಲಿ ಐಸಿಸ್ಗೆ ಸಂಬಂಧಿಸಿದ ಐವರು ಶಂಕಿತಉಗ್ರರನ್ನು ಬಂಧಿಸಿದೆ. ಹಾಗೇ, ಆ ಸ್ಥಳದಲ್ಲಿ ಅಧಿಕಾರಿಗಳು ಸೋಡಿಯಂ ಬಯೋಕಾರ್ಬೊನೇಟ್, ಸರ್ಕ್ಯೂಟ್ಗಳು, ಸ್ಟ್ರಿಪ್ನಂತಹ ಎಲೆಕ್ಟ್ರಾನಿಕ್ ಘಟಕಗಳನ್ನು ಹೊಂದಿರುವ ಪೆಟ್ಟಿಗೆಯನ್ನು ಸಹ ಪತ್ತೆಹಚ್ಚಿದ್ದಾರೆ. ಬಯೋಕಾರ್ಬೊನೇಟ್ ಅನ್ನು ಸುಧಾರಿತ ಸ್ಫೋಟಕ ಸಾಧನಗಳನ್ನು (IED) ತಯಾರಿಸಲು ಬಳಸಲಾಗುತ್ತದೆ. ಈ ಬಾಂಬ್ ತಯಾರಿಕಾ ಘಟಕವನ್ನು ಕೂಡ ಪೊಲೀಸರು ಪತ್ತೆಹಚ್ಚಿ ಅಲ್ಲಿರುವ ವಸ್ತುಗಳ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಶಂಕಿತ ಉಗ್ರರಿಂದ ವೈರ್ಗಳು, ಡಯೋಡ್ಗಳು, ಮದರ್ಬೋರ್ಡ್ ಮತ್ತು ಉಸಿರಾಟದ ಮಾಸ್ಕ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ 5 ಶಂಕಿತಉಗ್ರರನ್ನು ಬಂಧನ ಬಾಂಬ್ ತಯಾರಿಕಾ ಘಟಕ ಪತ್ತೆ

ದೆಹಲಿ ಪೊಲೀಸರು ಕೇಂದ್ರ ಗುಪ್ತಚರ ಸಂಸ್ಥೆಗಳ ಜೊತೆ ಜಂಟಿಯಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಐಸಿಸ್ ಪ್ರೇರಿತ ಶಂಕಿತ ಭಯೋತ್ಪಾದಕ ಮಾಡ್ಯೂಲ್ ಅನ್ನು ಪತ್ತೆಹಚ್ಚಿದ್ದಾರೆ. ಈ ಐವರ ಪೈಕಿ ಮೊದಲ ಬಂಧನ ದಕ್ಷಿಣ ದೆಹಲಿಯಲ್ಲಿ ನಡೆದಿದ್ದು, ಆ ಆರೋಪಿಯನ್ನು ಅಫ್ತಾಬ್ ಎಂದು ಗುರುತಿಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ (ವಿಶೇಷ ಘಟಕ) ಪ್ರಮೋದ್ ಕುಶ್ವಾಹ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇದರ ನಂತರ ಇತರ ರಾಜ್ಯಗಳಲ್ಲಿ ದಾಳಿ ನಡೆಸಲಾಯಿತು. ನಂತರ ದೆಹಲಿ ಪೊಲೀಸರ ವಿಶೇಷ ಘಟಕ ಮತ್ತು ಜಾರ್ಖಂಡ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ರಾಂಚಿಯ ಲೋವರ್ ಬಜಾರ್ ಪ್ರದೇಶದಿಂದ ಐಸಿಸ್ಗೆ ಸಂಬಂಧಿಸಿದ ಶಂಕಿತ ಕಾರ್ಯಕರ್ತ ಆಶರ್ ಡ್ಯಾನಿಶ್ ಎಂಬ ವ್ಯಕ್ತಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.