ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ-2025ರ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾಗಿರುವ ಲೇಖಕಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ನಿಗದಿಪಡಿಸಲು ಹೈಕೋರ್ಟ್ ಇಂದು ನಿರಾಕರಿಸಿತು.
ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿದಾರರ ಪರ ವಕೀಲರು, ಬೆಳಗ್ಗೆ ನ್ಯಾಯಾಲಯದ ಕಲಾಪ ಪ್ರಾರಂಭವಾಗುತ್ತಿದ್ದಂತೆ, ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಷಿ ಅವರಿದ್ದ ನ್ಯಾಯಪೀಠಕ್ಕೆ ಮೆಮೋ ಸಲ್ಲಿಸಿ, ತುರ್ತು ವಿಚಾರಣೆಗೆ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪೀಠ, ಅರ್ಜಿಯನ್ನು ಯಾವಾಗ ಸಲ್ಲಿಸಲಾಗಿದೆ? ಎಂದು ಪ್ರಶ್ನಿಸಿತು. ಇದಕ್ಕೆ ವಕೀಲರು ನಿನ್ನೆಯಷ್ಟೇ ಸಲ್ಲಿಸಿದ್ದೇವೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಇದೇ 22ರಂದು ದಸರಾ ಮಹೋತ್ಸವ ನಡೆಯಲಿದೆ. ಹೀಗಾಗಿ, ತುರ್ತು ವಿಚಾರಣೆಗೆ ನಿಗದಿ ಮಾಡಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ತುರ್ತು ವಿಚಾರಣೆಗೆ ನಿಗದಿಪಡಿಸಬೇಕಾದ ಅಗತ್ಯವಿಲ್ಲ, ಸಾಮಾನ್ಯದಂತೆ ಅರ್ಜಿ ಸಲ್ಲಿಕೆಯಾದ ನಾಲ್ಕು ದಿನಗಳಲ್ಲಿ ವಿಚಾರಣೆಗೆ ನಿಗದಿಯಾಗಲಿದೆ ಎಂದು ತಿಳಿಸಿ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು.