ನವದೆಹಲಿ: ದೆಹಲಿ ಪೊಲೀಸ್ ವಿಶೇಷ ಘಟಕವು ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಐವರನ್ನು ಬಂಧಿಸಿದೆ. ಆರೋಪಿಗಳಿಂದ ಸುಧಾರಿತ ಕಚ್ಛಾ ಸ್ಫೋಟಕ(ಐಇಡಿ)ಗಳನ್ನು ತಯಾರಿಸಲು ಬಳಸುವ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಆರೋಪಿಗಳು ಪಾಕಿಸ್ತಾನದ ಉಗ್ರ ಸಂಘಟನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಸಂಪರ್ಕದಲ್ಲಿದ್ದರು. ಈ ಎಲ್ಲಾ ಖಾತೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಈ ಭಯೋತ್ಪಾದಕ ಸಂಘಟನೆಯ ಗುಂಪಿನ ಪ್ರಮುಖ ಸದಸ್ಯ ಅಶ್ರಫ್ ಡ್ಯಾನಿಷ್ ಎಂಬಾತ ಭಾರತದಿಂದ ಪಾಕ್ ಮೂಲದ ವ್ಯಕ್ತಿಗಳೊಂದಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದ. ಈ ಮೂಲಕ ಭಾರತದಲ್ಲಿ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಮತ್ತು ಅವರನ್ನು ತಮ್ಮ ಜಾಲಕ್ಕೆ ಸೇರಿಸಿಕೊಳ್ಳಲು ಯತ್ನಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಗುಂಪು ದೇಶದಲ್ಲಿ ಕೋಮು ದ್ವೇಷ ಹರಡಲು ಮತ್ತು ಧಾರ್ಮಿಕ ಸಾಮರಸ್ಯ ಕದಡಲು ಹಲವು ಆನ್ಲೈನ್ ಗುಂಪುಗಳನ್ನು ನಡೆಸುತ್ತಿತ್ತು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಇನ್ನೂ 4ರಿಂದ 5 ರಾಜ್ಯಗಳಲ್ಲಿ ದಾಳಿ ನಡೆಸಲಾಗುವುದು. ಸುಮಾರು ಎಂಟು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇಲ್ಲಿಯವರೆಗೆ, ಐವರನ್ನು ಬಂಧಿಸಲಾಗಿದೆ. ಈ ಪೈಕಿ ಇಬ್ಬರನ್ನು ದೆಹಲಿ ಮತ್ತು ಓರ್ವನನ್ನು ಮಧ್ಯಪ್ರದೇಶ, ಹೈದರಾಬಾದ್ ಹಾಗೂ ರಾಂಚಿಯಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.