“ಹುಟ್ಟು – ಸಾವು ಬಾಳಿನಲ್ಲಿ ಎರಡು ಕೊನೆಗಳು ಎಂಬ ಸಾಲಿದೆ. ಆದರೆ ಇವೆರಡರ ಮಧ್ಯೆ ಏನಿದೆ? ಇವೆರಡರ ಮಧ್ಯೆ ಪ್ರೀತಿ ಇದೆ. ಒಂದು ವೇಳೆ ಸಾವೇ ಕೊನೆಯಾಗದಿದ್ದರೆ ಏನಿರುತ್ತದೆ? ಅದರ ಆಚೆಗೆ ಒಂದು ದುಷ್ಟ ಶಕ್ತಿ ಇರುತ್ತದೆ. ಆ ಶಕ್ತಿ ಈ ಪ್ರೀತಿಯನ್ನು ಹೊತ್ತುಕೊಂಡು ಹೊಗುತ್ತದೆ. ಇದೇ ನಾವು ಸಾಮಾನ್ಯ ಹಾರಾರ್ ಚಿತ್ರಗಳಲ್ಲಿ ಕಾಣುವುದು. ಆದರೆ ನಿರ್ದೇಶಕ ಆಕಾಶ್ ಶ್ರೀವತ್ಸ ದೈಜಿ ಚಿತ್ರವನ್ನು ಈ ರೀತಿಯ ಹಾರಾರ್ ಸಿನಿಮಾ ಮಾಡಿಲ್ಲ” ಎಂದು ಮಹಾನ್ ನಟ ರಮೇಶ್ ಅರವಿಂದ್ ಅವರು ತಿಳಿಸಿದರು.
ತಮ್ಮ ಅಮೋಘ ಅಭಿನಯದಿಂದ ಜನಮನಗೆದ್ದಿರುವ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬಕ್ಕೆ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ ‘ದೈಜಿ’ ಚಿತ್ರದ ಟೀಸರ್ ಬಿಡುಗಡೆ ಮಾಡಿ
ಚಿತ್ರತಂಡ ತಮ್ಮ ನಾಯಕನಿಗೆ ಶುಭಾಶಯ ತಿಳಿಸಿದೆ.
ಚಿತ್ರತಂಡ ತಮ್ಮ ನಾಯಕನಿಗೆ ಶುಭಾಶಯ ತಿಳಿಸಿದೆ.
ಈ ಸಂದರ್ಭದಲ್ಲಿ ರಮೇಶ್ ಅರವಿಂದ್ ಅವರು ಮಾತನಾಡಿದರು.
“ಈವರೆಗೂ ನಾನು ಸಾಕಷ್ಟು ಹಾರಾರ್ ಸಿನಿಮಾ ನೋಡಿದ್ದೇನೆ. ಆದರೆ ಈ ರೀತಿ ಕಥೆ ನಾನು ನೋಡಿಲ್ಲ. ಅಂತಹ ಚಿತ್ರ ಮಾಡಿದ್ದಾರೆ ನಿರ್ದೇಶಕ ವತ್ಸ ಅವರು. ನಾನು ಬಾಲಚಂದರ್ ಅವರಂತಹ ಹೆಸರಾಂತ ನಿರ್ದೇಶಕರ ಜೊತೆಗೆ ಹತ್ತು ಸಿನಿಮಾ ಮಾಡಿದ್ದೇನೆ. ಮುಂದೆ ವತ್ಸ ಅವರ ಜೊತೆಗೂ ಇದೇ ರೀತಿ ಮಾಡುತ್ತೇನೆ. ಇನ್ನೂ, ನಿರ್ಮಾಪಕ ರವಿ ಕಶ್ಯಪ್ ಅವರ ಸಿನಿಮಾ ಪ್ರೀತಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ರಾಧಿಕಾ ನಾರಾಯಣ್ ಅವರಂತೂ ಮಹಾನಟಿ. ದಿಗಂತ್ ಅವರ ಲವಲವಿಕೆ ನನಗೆ ಬಹಳ ಇಷ್ಟ. ಈ ಚಿತ್ರದಲ್ಲಿ ವಿದೇಶದ ಪ್ರಸಿದ್ದ ಕಲಾವಿದರೊಂದಿಗೂ ನಟಿಸಿದ್ದೇನೆ. ಆದಷ್ಟು ಬೇಗ ‘ದೈಜಿ’ ಚಿತ್ರವನ್ನು ತೆರೆಯ ಮೇಲೆ ನೋಡಲು ಕಾತುರನಾಗಿದ್ದೇನೆ ಎಂದು ಹೇಳಿದರು.
ನಿರ್ಮಾಪಕ ರವಿ ಕಶ್ಯಪ್ “ಹತ್ತು ವರ್ಷಗಳ ಹಿಂದೆ ನಾನು, ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಈ ಚಿತ್ರದ ಬಗ್ಗೆ ಹೇಳಿದ್ದೆ. ಈಗ ಕಾಲ ಕೂಡಿ ಬಂದಿದೆ. ಇದು ವಿದೇಶದಲ್ಲಿ ನಾನು ಕಂಡಿರುವ ನೈಜ ಘಟನೆ ಆಧಾರಿತ ಚಿತ್ರ. ಯಾವುದೇ ಹಾಲಿವುಡ್ ಚಿತ್ರಕ್ಕೂ ಕಡಿಮೆ ಇಲ್ಲದಂತೆ ಮೂಡಿಬಂದಿರುವ ನಮ್ಮ ‘ದೈಜಿ’ ಚಿತ್ರವನ್ನು ಕೆಲವೆ ದಿನಗಳಲ್ಲಿ ನಿಮ್ಮ ಮುಂದೆ ತರುತ್ತೇವೆ” ಎಂದರು.
“ನಿರ್ಮಾಪಕ ಹೇಳಿದ ನೈಜ ಘಟನೆಯ ಈ ಕಥೆಯೇ ‘ದೈಜಿ’ ಚಿತ್ರಕ್ಕೆ ಸ್ಪೂರ್ತಿ. ನಂತರ ಈ ಕಥೆಗೆ ರಮೇಶ್ ಅರವಿಂದ್ ಅವರೇ ಸೂಕ್ತ ಎನಿಸಿ, ಅವರಿಗೆ ಕಥೆ ಹೇಳಿದಾಗ, ನಟಿಸಲು ಒಪ್ಪಿಕೊಂಡಿದ್ದು ಬಹಳ ಖುಷಿಯಾಯಿತು. ಸೂರ್ಯ ಎಂಬ ಪಾತ್ರದಲ್ಲಿ ರಮೇಶ್ ಅವರು ಕಾಣಿಸಿಕೊಂಡಿದ್ದಾರೆ. ರಾಧಿಕಾ ನಾರಾಯಣ್ ಅವರು ಭೂಮಿ ಪಾತ್ರದಲ್ಲಿ ಹಾಗೂ ರಮೇಶ್ ಅವರ ತಮ್ಮನಾಗಿ ನಟ ದಿಗಂತ್, ಗಗನ್ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ‘ದೈಜಿ’ ಎಂದರೆ ಪ್ರೇತಾತ್ಮಗಳ ದೈವ ಎಂದರ್ಥ” ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದರು.
ನಟಿ ರಾಧಿಕಾ ನಾರಾಯಣ್ ಹಾಗೂ ದಿಗಂತ್ ತಮ್ಮ ಪಾತ್ರಗಳ ಬಗ್ಗೆ, ಚಿತ್ರದಲ್ಲಿ ನಟಿಸಿರುವ ಬಿ.ಎಂ.ಗಿರಿರಾಜ್, ಬರಹಗಾರ ಅಭಿಜಿತ್ ಹಾಗೂ ಕಾಸ್ಟಿಂಗ್ ಡೈರೆಕ್ಟರ್ ಸುನಯನ ಸುರೇಶ್ ಮುಂತಾದವರು “‘ದೈಜಿ’ ಬಗ್ಗೆ ಮಾತನಾಡಿದರು. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಕಲನವಿದೆ.