ಇಬ್ಬರು ಐಎಸ್​ಐಎಸ್​ ಉಗ್ರರ ರಾಂಚಿಯ ಲಾಡ್ಜ್​ನಲ್ಲಿ ಬಂಧನ

Ravi Talawar
ಇಬ್ಬರು ಐಎಸ್​ಐಎಸ್​ ಉಗ್ರರ ರಾಂಚಿಯ ಲಾಡ್ಜ್​ನಲ್ಲಿ ಬಂಧನ
WhatsApp Group Join Now
Telegram Group Join Now

ರಾಂಚಿ: ದೆಹಲಿ ಪೊಲೀಸ್​ ವಿಶೇಷ ಘಟಕದ ಸಹಯೋಗದೊಂದಿಗೆ ಜಾರ್ಖಂಡ್​ ಭಯೋತ್ಪಾದಕ ವಿರೋಧಿ ಪಡೆ (ಎಟಿಎಸ್​) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಐಎಸ್​ಐಎಸ್​ (ಐಸಿಸ್​) ಉಗ್ರರನ್ನು ರಾಂಚಿಯ ಲಾಡ್ಜ್​ನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋವರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಇಸ್ಲಾಂ ನಗರದ ತಬಾರಕ್ ಲಾಡ್ಜ್‌ನಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಆಶರ್​ ಡ್ಯಾನಿಶ್​ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈತ ಬೊಕಾರೊ ಜಿಲ್ಲೆಯ ಪೆಟ್ವಾರ್​​ ನಿವಾಸಿ ಎಂದು ತಿಳಿದು ಬಂದಿದ್ದು, ಬಹುಕಾಲದಿಂದ ಲಾಡ್ಜ್​ನಲ್ಲಿ ವಾಸಿಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಯ ಕುರಿತು ನಿಖರ ಸುಳಿವು ಲಭ್ಯವಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್​ ವಿಶೇಷ ಘಟಕ ಜಾರ್ಖಂಡ್​ ಎಟಿಎಸ್​ ಜೊತೆಗೂಡಿ ಲಾಡ್ಜ್​ ಮೇಲೆ ದಾಳಿ ಮಾಡಿತ್ತು. ಈ ಕಾರ್ಯಾಚರಣೆಯಲ್ಲಿ ಆಶರ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಈತನ ಕೋಣೆಯಲ್ಲಿದ್ದ ಹಲವು ಎಲೆಕ್ಟ್ರಾನಿಕ್​ ಸಾಧನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಶರ್​ ಐಎಸ್​ಐಎಸ್​ ಮಾಡ್ಯೂಲ್‌ನೊಂದಿಗೆ ಸಂಪರ್ಕದಲ್ಲಿದ್ದು, ಇತರೆ ಅನೇಕ ಅನುಮಾನಾಸ್ಪದ ಕಾರ್ಯಾಚರಣೆಗಳಲ್ಲಿ ಈತನ ಸಂಪರ್ಕವಿರುವ ಕುರಿತು ಅನುಮಾನವಿದೆ. ಈತ ದೆಹಲಿಯಲ್ಲಿ ದಾಖಲಾದ ಪ್ರಕರಣದಲ್ಲೂ ಬೇಕಾಗಿದ್ದ. ಈತನ ಬಳಿ ಇದ್ದ ಅನೇಕ ಸಾಧನಗಳನ್ನು ವಶಕ್ಕೆ ಪಡೆಯಲಾಗಿದ್ದು, ಜಾಲದ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಪೊಲೀಸ್​ ವಿಶೇಷ ಘಟಕ ಆಶರ್​ನನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದುಕೊಂಡು ಹೋಗಿದೆ. ಜಾರ್ಖಂಡ್​ ಅಥವಾ ದೇಶದ ಇತರೆ ಭಾಗದಲ್ಲಿ ಏನಾದರೂ ವಿಧ್ವಂಸಕ ಕೃತ್ಯಕ್ಕೆ ಯೋಜನೆ ನಡೆದಿತ್ತಾ ಎಂಬ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಈತನ ಕುರಿತು ಹೆಚ್ಚಿನ ಮಾಹಿತಿಗೆ ಲಾಡ್ಜ್​ ಸಿಬ್ಬಂದಿಯನ್ನು ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article