ನವದೆಹಲಿ, ಸೆಪ್ಟೆಂಬರ್ 8: ಭಾರತ ಸರ್ಕಾರ ಮತ್ತು ಇಸ್ರೇಲ್ ಸರ್ಕಾರದ ಮಧ್ಯೆ ಸೋಮವಾರ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಏರ್ಪಟ್ಟಿದೆ. ಇದರೊಂದಿಗೆ ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ಭಾರತ ಮತ್ತು ಇಸ್ರೇಲ್ನ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಬೆಜಾಲೆಲ್ ಸ್ಮಾಟ್ರಿಚ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ದ್ವಿಪಕ್ಷೀಯ ಹೂಡಿಕೆ ಒಪ್ಪಂದವು ಎರಡು ದೇಶಗಳ ಮಧ್ಯೆ ಪರಸ್ಪರರ ಹೂಡಿಕೆ ರಕ್ಷಣೆಗೆ ಬದ್ಧತೆ ತೋರುವ ಒಂದು ಸಹಕಾರ ವ್ಯವಸ್ಥೆಯಾಗಿದೆ. ಅಂದರೆ, ಭಾರತದಲ್ಲಿ ಇಸ್ರೇಲಿನ ಖಾಸಗಿ ಹೂಡಿಕೆದಾರರು ಮಾಡುವ ಹೂಡಿಕೆಗಳನ್ನು ಭಾರತ ರಕ್ಷಿಸಲು ಬದ್ಧವಾಗಿರುತ್ತದೆ. ಹಾಗೆಯೇ, ಇಸ್ರೇಲ್ನಲ್ಲಿ ಭಾರತೀಯರು ಮಾಡುವ ಹೂಡಿಕೆಗಳನ್ನು ಆ ದೇಶವು ರಕ್ಷಣೆ ಮಾಡುತ್ತದೆ. ಇದು ಭಾರತ ಹಾಗೂ ಇಸ್ರೇಲ್ ನಡುವಿನ ದ್ವಿಪಕ್ಷೀಯ ಒಪ್ಪಂದದಲ್ಲಿ ಮಾಡಲಾಗಿರುವ ವ್ಯವಸ್ಥೆ.