ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಎರಡನೇ ದಿನವಾದ ಇಂದೂ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿ ಮುಂದುವರೆದಿದೆ. ರಾತ್ರಿ ಸ್ವಲ್ಪ ಕಾಲದವರೆಗೆ ಗುಂಡಿನ ದಾಳಿ ಮುಂದುವರೆದಿತ್ತು. ಬಳಿಕ ಇಂದು ಬೆಳಗ್ಗೆಯಿಂದ ಪುನಾರಂಭಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಕೌಂಟರ್ನಲ್ಲಿ ಇದುವರೆಗೆ ಪಾಕಿಸ್ತಾನಿ ಪ್ರಜೆ ಎಂದು ಹೇಳಲಾದ ವ್ಯಕ್ತಿ ಸೇರಿದಂತೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದೇ ವೇಳೆ, ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಸೋಮವಾರದಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ಸೇನಾ ಮೇಜರ್ ಕೂಡ ಗಾಯಗೊಂಡಿದ್ದಾರೆ.
ಕುಲ್ಗಾಮ್ನ ಗುಡಾರ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆಯ ಕುರಿತು ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ ನಂತರ ಎನ್ಕೌಂಟರ್ ನಡೆದಿದೆ. ಭದ್ರತಾ ಸಿಬ್ಬಂದಿ ಶೋಧ ಶುರು ಮಾಡುತ್ತಿದ್ದಂತೆ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದಾರೆ.
ಕಾರ್ಯಾಚರಣೆಯ ವೇಳೆ ಸಬ್ ಪರ್ಭಾತ್ ಗೌರ್ ಮತ್ತು ಲ್ಯಾನ್ಸ್ ನಾಯಕ್ ನರೇಂದರ್ ಸಿಂಧು ಎಂಬ ಇಬ್ಬರು ಯೋಧರು ಮತ್ತು ಸೇನಾ ಮೇಜರ್ ಒಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳಾದ ಗೌರ್ ಮತ್ತು ಸಿಂಧು ಹುತಾತ್ಮರಾಗಿದ್ದು, ಅಧಿಕಾರಿಯ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.