ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮಹಿಳಾ ಸಂಘಟನೆಗಳು ಪತ್ರ ಬರೆದಿವೆ. ʻಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು? ʼ ಶೀರ್ಷಿಕೆಯಲ್ಲಿ ಪತ್ರ ಬರೆಯಲಾಗಿದ್ದು, ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಆತಂಕ ಹೊರಹಾಕಿವೆ.
ಸುಮಾರು 10 ಮಹಿಳಾ ಸಂಘಟನೆಗಳು ಹಾಗೂ 40 ಸಾಮಾಜಿಕ ಹೋರಾಟಗಾರ್ತಿಯರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಎಸ್ಐಟಿ ತನಿಖೆ, ಚಿನ್ನಯ್ಯನ ಬಂಧನ, ಸುಜಾತ ಭಟ್ ಪ್ರಕರಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಈ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ, ಪ್ರಕರಣದಲ್ಲಿ ಉರುಳಿಲ್ಲ ಎನ್ನುವಂತೆ ದಾರಿ ತಪ್ಪಿಸುವಂತಹ ಹೇಳಿಕೆಯನ್ನು ಡಿಸಿಎಂ ನೀಡಿದ್ದಾರೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ವಿಪಕ್ಷಗಳ ಒತ್ತಡಕ್ಕೆ ಮಣಿದಿದ್ದಾರೆ ಎಂದು ಮಹಿಳಾ ಹೋರಾಟಗಾರರು ಅಸಮಾಧಾನ ಹೊರಹಾಕಿದ್ದಾರೆ.
ಎಸ್ಐಟಿ, 2018ರ ವಿ.ಎಸ್ ಉಗ್ರಪ್ಪ ಸಮಿತಿ ನೀಡಿದ ವರದಿ ಪರಿಗಣಿಸಬೇಕು. ಎಸ್ಐಟಿ ನ್ಯಾಯ ಸಮ್ಮತ ತನಿಖೆ ನಡೆಸಲು ಸರ್ಕಾರದ ಜನಪ್ರತಿನಿಧಿಗಳು ಸಹಕರಿಸಬೇಕು. ಸೌಜನ್ಯ ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿದ ಅಧಿಕಾರಿಗಳನ್ನು ನ್ಯಾಯಲಯದ ಆದೇಶದಂತೆ ತನಿಖೆಗೆ ಒಳಪಡಿಸಬೇಕು ಎಂದು ಕೋರಲಾಗಿದೆ.