ನವದೆಹಲಿ: ಭಾರತೀಯ ಸರಕುಗಳ ಮೇಲೆ ಶೇಕಡಾ 50ರಷ್ಟು ಸುಂಕ ವಿಧಿಸುತ್ತಿರುವ ಕುರಿತು ಅಮೆರಿಕದೊಂದಿಗೆ ಮಾತುಕತೆಗಳು ನಡೆಯುತ್ತಿವೆ. ಹಾಗಾಗಿ, ಯಾರೂ ಸಹ ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಗುರುವಾರ ಸಂದರ್ಶನವೊಂದರಲ್ಲಿ ಉಭಯ ದೇಶಗಳ ವ್ಯಾಪಾರ ವಿಚಾರ ಪ್ರಸ್ತಾಪಿಸಿದ ಅವರು, ಭಾರತ ಮತ್ತು ಅಮೆರಿಕ ಸಮಾನ, ಸಮತೋಲಿತ ಮತ್ತು ನ್ಯಾಯಯುತ ಒಪ್ಪಂದಕ್ಕೆ ಬರುವುದು ಖಚಿತ. ಹಾಗಾಗಿ ಯಾರೂ “ಭಯಪಡುವ” ಅಗತ್ಯವಿಲ್ಲ ಎಂದರು.
ನಾವು ಮಾತುಕತೆಗೆ ಅವಕಾಶ ನೀಡಬೇಕು. ಅವಕಾಶ ನೀಡುವುದರಿಂದ ಉಭಯ ದೇಶಗಳ ನಡುವಿನ ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಇದರಿಂದ ಸಮಾನ, ನ್ಯಾಯಯುತ ಮತ್ತು ಸಮತೋಲಿತ ಒಪ್ಪಂದಕ್ಕೆ ಬರಲು ಸಾಧ್ಯ. ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಮಾತುಕತೆಗೆ ಎಂದಿಗೂ ಇಂತಹದ್ದೇ ಸಮಯದ ಮಿತಿ ಅಂತ ಇರುವುದಿಲ್ಲ. ಭವಿಷ್ಯದ ದೃಷ್ಟಿಯಿಂದ ಅವುಗಳನ್ನು ತಾಳ್ಮೆಯಿಂದ ನೋಡಬೇಕು ಎಂದು ಗೋಯಲ್ ಹೇಳಿದರು.