ವಾಷಿಂಗ್ಟನ್: ಕಂಪ್ಯೂಟರ್ ಚಿಪ್ಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುವುದಾಗಿ ಬೆದರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ತಮ್ಮ ಸುಂಕ ನೀತಿಯ ಕುರಿತು ಪುನರುಚ್ಚರಿಸಿದ್ದು, ತಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುವ ಸೆಮಿಕಂಡಕ್ಟರ್‌ಗಳ ಮೇಲೆ ಸಾಕಷ್ಟು ಗಣನೀಯ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.
ಟೆಕ್ ಉದ್ಯಮಗಳ ಕಾರ್ಯದರ್ಶಿಗಳೊಂದಿಗೆ ಗುರುವಾರ ರಾತ್ರಿ ಔತಣಕೂಟದಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ನಾವು ಶೀಘ್ರ ಗಣನೀಯ ಸುಂಕವನ್ನು ವಿಧಿಸಲಿದ್ದು, ಇದು ದುಬಾರಿ ಆಗಿರುವುದಿಲ್ಲ, ಸುಸ್ಥಿರವಾಗಿರಲಿದೆ ಎಂದಿದ್ದಾರೆ. ಈ ಹೊಸ ಸುಂಕದ ಜಾರಿ ಬಗ್ಗೆ ನಿಗದಿತ ದಿನ ಅಥವಾ ವಿವರಗಳ ಬಗ್ಗೆ ಅವರು ಮಾತನಾಡಿಲ್ಲ.
ಆಗಸ್ಟ್ ಆರಂಭದಲ್ಲಿ ಟ್ರಂಪ್, ಅಮೆರಿಕದಲ್ಲಿ ಹೂಡಿಕೆ ಮಾಡದ ಸಂಸ್ಥೆಗಳ ಸೆಮಿಕಂಡಕ್ಟರ್‌ಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುವ ಬಗ್ಗೆ ತಿಳಿಸಿದ್ದರು. ಈ ಸುಂಕ ಹೆಚ್ಚಳದ ಮಾತು ಏಷ್ಯಾದ ಚಿಪ್‌ಮೇಕರ್ ಷೇರುಗಳಲ್ಲಿ ಏರಿಳಿತವನ್ನು ಉಂಟು ಮಾಡಿತ್ತು.
ನಾವು ಚಿಪ್ಸ್ ಮತ್ತು ಸೆಮಿಕಂಡಕ್ಟರ್‌ಗಳ ಮೇಲೆ ಶೇ.100ರಷ್ಟು ಸುಂಕವನ್ನು ವಿಧಿಸುತ್ತೇವೆ. ಒಂದು ವೇಳೆ, ಈ ಚಿಪ್‌ಗಳನ್ನು ಅಮೆರಿಕದಲ್ಲಿ ನಿರ್ಮಿಸುತ್ತಿದ್ದರೆ, ಇದರ ಮೇಲೆ ಯಾವುದೇ ಶುಲ್ಕವಿಲ್ಲ. ಅಮೆರಿಕದಲ್ಲಿ ಕಂಪ್ಯೂಟರ್ ಚಿಪ್‌ಗಳನ್ನು ತಯಾರಿಸುವ ಕಂಪನಿಗಳು ಆಮದು ತೆರಿಗೆಯಿಂದ ಮುಕ್ತವಾಗುತ್ತವೆ ಎಂದು ಟ್ರಂಪ್ ತಿಳಿಸಿದ್ದರು.