ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿರುವ ಡೈಲಾಗ್ ‘ಕಂಗ್ರಾಜುಲೇಷನ್ಸ್ ಬ್ರದರ್ ‘. ಇದೇ ಈಗ ಸಿನಿಮಾ ಶೀರ್ಷಿಕೆಯಾಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ಚಿತ್ರದ
ಹಳೇ ಸನ್ಯಾಸಿ ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ.
ನಾಯಕ ರಕ್ಷಿತ್ ನಾಗ್ ಅವರೆ ಸಾಹಿತ್ಯ ಬರೆದು, ಸೂರಜ್ ಜೋಯಿಸ್ ಸಂಗೀತ ಸಂಯೋಜಿರುವ ಹಾಗೂ ಜನಪ್ರಿಯ ನಿರ್ದೇಶಕ ಜೋಗಿ ಪ್ರೇಮ್ ಅವರು ಹಾಡಿರುವ ಹಳೇ ಸನ್ಯಾಸಿ ಹಾಡನ್ನು ನಟಿ ರಾಗಿಣಿ ದ್ವಿವೇದಿ, ನಟರಾದ ರಾಜವರ್ಧನ್, ವಿಕ್ಕಿ ವರುಣ್ ಬಿಡುಗಡೆ ಮಾಡಿದರು. ಬೆಂಗಳೂರಿನ ಫಿನಿಕ್ಸ್ ಮಾಲ್ ಆಫ್ ಏಷ್ಯಾ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅಭಿಮಾನಿಗಳು ಸಾಕ್ಷಿಯಾದರು. ಆನಂದ್ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ.
ಕಲ್ಲೂರ್ ಸಿನಿಮಾಸ್, ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಸ್ಕ್ರೀನ್ ಫಸ್ಟ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ಅವರು ನಿರ್ಮಿಸಿದ್ದು,ಹರೀಶ್ ರೆಡ್ಡಿ ಸಹ ನಿರ್ಮಾಪಕರಾಗಿ ಹಾಗೂ ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
ಈ ಚಿತ್ರವನ್ನು ಪ್ರತಾಪ್ ಗಂಧರ್ವ ನಿರ್ದೇಶಿಸಿದ್ದಾರೆ. ಹೆಸರಾಂತ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.ನಾಯಕಿಯರಾಗಿ ಸಂಜನಾ ದಾಸ್ ಮತ್ತು ಅನುಶಾ ನಟಿಸಿದ್ದು, ಹಿರಿಯ ನಟ ಶಶಿಕುಮಾರ್ ಸಹ ಪ್ರಮುಖಪಾತ್ರದಲ್ಲಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ನಟಿ ರಾಗಿಣಿ ದ್ವಿವೇದಿ “ನಾನು ಸಂತು ಅವರ ಸಿನಿಮಾಗಳಲ್ಲಿ ಕೆಲಸ ಮಾಡಿಲ್ಲ. ಆದರೆ ಅವರ ನಿರ್ದೇಶನದ ಚಿತ್ರಗಳು ನನಗೆ ಇಷ್ಟ. ಸಂತು ಅವರ ಸಾರಥ್ಯದಲ್ಲಿ ಹೊಸತಂಡವೊಂದು ಹೊಸ ಸಿನಿಮಾ ಮಾಡಿದೆ. ಹಾಡು ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ” ಎಂದು ಹಾರೈಸಿದರು .
“ನನ್ನ ಅಭಿನಯದ ‘ಬಿಚ್ಚುಗತ್ತಿ’ ಚಿತ್ರಕ್ಕೆ ಸಂತು ಅವರೆ ನಿರ್ದೇಶಕ. ಅವರ ಕಾರ್ಯವೈಖರಿ ಹತ್ತಿರದಿಂದ ನೋಡಿದ್ದೇನೆ. ಇನ್ನೂ, ಈ ಚಿತ್ರತಂಡವನ್ನು ನೋಡಿದಾಗ ಖುಷಿಯಾಯಿತು. ಅವರು ಜನರ ಬಳಿ ಹೋಗಿ ಪ್ರಚಾರ ಮಾಡುತ್ತಿರುವ ಪರಿ ಬಹಳ ಇಷ್ಟವಾಯಿತು. ಹಾಡು ಚೆನ್ನಾಗಿದೆ” ಎಂದರು ನಟ ರಾಜವರ್ಧನ್. “ನಾನು ಹಾಗೂ ಹರಿ ಸಂತೋಷ್ ಇಬ್ಬರು ಬಹಳ ವರ್ಷಗಳ ಸ್ನೇಹಿತರು. ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಹೊಸ ಚಿತ್ರವೊಂದು ಸಹ ಮೂಡಿಬರುತ್ತಿದೆ. ಬಿಡುಗಡೆಯಾಗಿರುವ ಈ ಚಿತ್ರದ ಹಾಡು, ಸಂಗೀತ ಸಂಯೋಜನೆ ಹಾಗೂ ಜೋಗಿ ಪ್ರೇಮ್ ಅವರ ಗಾಯನ ಎಲ್ಲವೂ ಮಧುರವಾಗಿದೆ” ಎಂದು ನಟ ವಿಕ್ಕಿ ವರುಣ್ ತಿಳಿಸಿದರು. ರಾಘವೇಂದ್ರ ಶೆಟ್ಟಿ ಮಾಜಿ ಅಧ್ಯಕ್ಷರು, ಕರಕುಶಲ ನಿಗಮ ಮಂಡಳಿ, ನಿರ್ಮಾಪಕರಾದ ದೇವೇಂದ್ರ, ವಿತರಕರಾದ ಮುನೇಂದ್ರ ಮುಂತಾದವರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.