ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇದೇ ಸೆಪ್ಟೆಂಬರ್ 13ರಂದು ಮಿಜೋರಾಂ ಮತ್ತು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಐಜ್ವಾಲ್ನಲ್ಲಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲಿಗೆ ಮಿಜೋರಾಂಗೆ ಆಗಮಿಸಲಿರುವ ಪ್ರಧಾನಿ ಮೋದಿ ಅಲ್ಲಿ ನೂತನ ಬೈರಬಿ – ಸೈರಾಂಗ್ ರೈಲ್ವೆ ಯೋಜನೆ ಉದ್ಘಾಟನೆ ಮಾಡಲಿದ್ದಾರೆ. ಈ ಕುರಿತು ಮಿಜೋರಾಂ ಸರ್ಕಾರದ ಹಲವಾರು ಅಧಿಕಾರಿಗಳು ಐಜ್ವಾಲ್ನಿಂದ ಪ್ರಧಾನಿ ಮಣಿಪುರಕ್ಕೆ ವಿಮಾನದಲ್ಲಿ ಆಗಮಿಸಲಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ. 2023ರ ಮೇನಲ್ಲಿ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಮಣಿಪುರಕ್ಕೆ ಪ್ರಧಾನಿ ಮೋದಿ ಮೊದಲ ಭೇಟಿ ಇದಾಗಿದೆ.
ಪ್ರಧಾನಿ ಮೋದಿ ಆಗಮನದ ಕುರಿತು ಇನ್ನು ಕೂಡ ಅಂತಿಮ ಪ್ರವಾಸ ಮಾಹಿತಿ ಲಭ್ಯವಾಗಿಲ್ಲ ಎಂದು ಇಂಫಾಲದ ಅಧಿಕಾರಿಗಳು ತಿಳಿಸಿದರೂ, ಅವರ ಆಗಮನವನ್ನು ದೃಢಪಡಿಸಿದ್ದಾರೆ. ಮಿಜೋರಾಂ ಮುಖ್ಯ ಕಾರ್ಯದರ್ಶಿ ಖಿಲ್ಲಿ ರಾಮ್ ಮೀನಾ, ಪ್ರಧಾನಿ ಆಗಮನದ ಹಿನ್ನೆಲೆ ವಿವಿಧ ಇಲಾಖೆ ಮತ್ತು ಕಾನೂನು ಜಾರಿ ಸಂಸ್ಥೆಗಳ ಜೊತೆ ಸಭೆ ನಡೆಸಿದ್ದು, ಸನ್ನದ್ಧತೆ ಕುರಿತು ಚರ್ಚಿಸಿದ್ದಾರೆ.