ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ 60 ವಿಧಾನ ಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಖ್ಯಮಂತ್ರಿ ಪೇಮಾ ಖಂಡು ಮತ್ತು ಉಪ ಮುಖ್ಯಮಂತ್ರಿ ಚೌನ ಮೇಯ್ನ್ ಮತ್ತು 8 ಜನ ಸೇರಿ ಒಟ್ಟು 10 ಮಂದಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಏಪ್ರಿಲ್ 19ರಂದು ಅರುಣಾಚಲ ಪ್ರದೇಶದ 60 ವಿಧಾನ ಸಭಾ ಕ್ಷೇತ್ರಗಳಿಗೆ ಮತ್ತು 2 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಿಗದಿಯಾಗಿತ್ತು. 60 ವಿಧಾನ ಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಶನಿವಾರ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾದ ಹಿನ್ನೆಲೆ ಪೇಮಾ ಖಂಡು ಮತ್ತು ಇತರೆ ಒಂಬತ್ತು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ಪವನ್ ಕುಮಾರ್ ಸೇನ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ತವಾಂಗ್ ಜಿಲ್ಲೆಯ ಮುಕ್ತೋ ವಿಧಾನಸಭಾ ಕ್ಷೇತ್ರದಿಂದ ಪೇಮಾ ಖಂಡು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಯಾರೊಬ್ಬೂ ನಾಮಪತ್ರ ಸಲ್ಲಿಸದ ಕಾರಣ ಇವರು ಅವಿರೋಧವಾಗಿ ಆಯ್ಕೆಯಾದರು. ಇನ್ನೂ ಚೌಕಂ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಚೌನಾ ಮೇಯ್ನ್ ವಿರುದ್ಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಯಾಮ್ಸೊ ಕ್ರಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರು ಕೊನೆ ಕ್ಷಣದಲ್ಲಿ ತಮ್ಮ ನಾಮಪತ್ರ ಹಿಂಪಡೆದ ಹಿನ್ನೆಲೆ ಚೌನಾ ಮೇಯ್ನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ತಾಲಿ ಕ್ಷೇತ್ರದಿಂದ ಜಿಕಕೆ ಟಾಕೂ, ರೋಯಿಂಗ್ ಕ್ಷೇತ್ರದಿಂದ ಮುಚು ಮಿಥಿ, ಇಟಾನಗರ ಕ್ಷೇತ್ರದಿಂದ ತೆಚಿ ಕಸೋ, ತಲಿಹಾ ಕ್ಷೇತ್ರದಿಂದ ನ್ಯಾಟೋ ದುಕಾಮ್, ಬೊಮ್ದಿಲಾ ಕ್ಷೇತ್ರದಿಂದ ಡೊಂಗ್ರು ಸೊಯಿಂಗ್ಜು, ಸಾಗಲೀ ಕ್ಷೇತ್ರದಿಂದ ರಾತು ತೆಚಿ, ಜಿರೋ ಹಪೋಲಿ ಕ್ಷೇತ್ರದಿಂದ ಹಗೆ ಅಪಾ, ಹಾಗೂ ಹಯುಲಿಯಾಂಗ್ ಕ್ಷೇತ್ರದಿಂದ ದಾಸಂಗ್ಲೂ ಪುಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆರು ಕ್ಷೇತ್ರಗಳಲ್ಲಿ ಒಂದೊಂದೇ ನಾಮಪತ್ರ ಸಲ್ಲಿಕೆ ಯಾಗಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ್ತೆ 4 ಕ್ಷೇತ್ರಗಳಲ್ಲಿ ವಿರೋಧ ಪಕ್ಷದ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.