ಇಂಡಿ: ವ್ಯಕ್ತಿಯ ದೈಹಿಕ, ಮಾನಸಿಕ ಯೋಗಕ್ಷೇಮ ಮತ್ತು ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಯು ಮುಖ್ಯವಾಗಿದ್ದು, ಇದು ಎಲ್ಲರಲ್ಲಿ ಏಕತೆಯ ಭಾವನೆಯನ್ನು ಮೂಡಿಸಿ, ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಬೆಳೆಸುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಮೇಜರ್ ಧ್ಯಾನಚಂದ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡ “ರಾಷ್ಟ್ರೀಯ ಕ್ರೀಡಾ ದಿನ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯು ವ್ಯಕ್ತಿಯ ವ್ಯಕ್ತಿತ್ವವನ್ನು ಸುಧಾರಿಸಿ, ಅವರಲ್ಲಿ ಶಿಸ್ತು, ಕ್ರೀಡಾ ಮನೋಭಾವ, ತಂಡದ ಕೆಲಸ ಮತ್ತು ಸ್ಪರ್ಧಾತ್ಮಕತೆಯ ಮೌಲ್ಯಗಳನ್ನು ಕಲಿಸುತ್ತದೆ. ಅದು ವಿವಿಧ ಜನರನ್ನು ಒಟ್ಟುಗೂಡಿಸಿ, ಏಕತೆ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಕ್ರೀಡೆಯಿಂದ ಸಾಮಾಜಿಕ ಕೌಶಲ್ಯ ಅಭಿವೃದ್ಧಿ ಹೊಂದಿ, ಅದು ದೇಶದ ಆರ್ಥಿಕತೆಗೆ ಸಹಾಯ ಮಾಡುತ್ತದೆ.ಕ್ರೀಡೆಯು ತಾಳ್ಮೆ, ಶಿಸ್ತು, ಪ್ರಾಮಾಣಿಕತೆ, ಸಮರ್ಪಣೆ ಮತ್ತು ಜೀವನದ ವೈಫಲ್ಯಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.
