ಟೋಕಿಯೋ: ಎರಡು ದಿನಗಳ ಪ್ರವಾಸಕ್ಕಾಗಿ ಜಪಾನ್ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಕುರಿತು ಒತ್ತಿ ಹೇಳಿದ್ದಾರೆ.
ಭಾರತದಲ್ಲಿ ಬಂಡವಾಳ ಬೆಳವಣಿಗೆ ಕಾಣುವುದು ಮಾತ್ರವಲ್ಲ, ದ್ವಿಗುಣಗೊಂಡಿದೆ. ರಾಜಕೀಯ ಸ್ಥಿರತೆ ಮತ್ತು ಪಾರದರ್ಶಕತೆ ಇದಕ್ಕೆ ಕಾರಣ. ದೇಶ ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎಂದರು.
ಭಾರತದಲ್ಲಿ ಕಳೆದ 11 ವರ್ಷದಲ್ಲಿ ಬೆಳವಣಿಗೆ ಮತ್ತು ಸಾಕಷ್ಟು ಸುಧಾರಣೆಗಳು ಆಗುತ್ತಿರುವುದರ ಬಗ್ಗೆ ನಿಮಗೆ ಅರಿವಿದೆ. ದೇಶ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ನಾವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದ್ದೇವೆ. ಜಾಗತಿಕ ಜಿಡಿಪಿಗೆ ನಮ್ಮ ಕೊಡುಗೆ ಶೇ.18ರಷ್ಟಿದೆ. ಸುಧಾರಣೆ, ಪರಿವರ್ತನೆ ಮತ್ತು ಕಾರ್ಯಕ್ಷಮತೆಯ ನಮ್ಮ ವಿಧಾನ ಈ ಎಲ್ಲಾ ಪ್ರಗತಿಗೆ ಚಾಲನೆ ನೀಡುತ್ತಿದೆ ಎಂದು ಭಾರತ-ಜಪಾನ್ ಜಂಟಿ ಆರ್ಥಿಕ ವೇದಿಕೆಯಲ್ಲಿ ಮೋದಿ ಮಾತನಾಡಿದರು.
ಕಳೆದೊಂದು ದಶಕದಿಂದ ಭಾರತ ಮುಂದಿನ ಪೀಳಿಗೆಯ ಚಲನಶೀಲನತೆ ಮತ್ತು ಲಾಜಿಸ್ಟಿಕ್ ಮೂಲಸೌಕರ್ಯದಲ್ಲಿ ಅದ್ಬುತ ಪ್ರಗತಿ ಕಾಣುತ್ತಿದೆ. ನಮ್ಮ ಬಂದರು ಸಾಮರ್ಥ್ಯ ದುಪ್ಪಟ್ಟಾಗಿದೆ. ಜಪಾನ್ ಸಹಕಾರದಿಂದಾಗಿ ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಯೋಜನೆ ಕಾರ್ಯ ನಿರ್ವಹಣೆ ಮಾಡಲಿದೆ. ನಮ್ಮ ಪ್ರಯಾಣ ಇಲ್ಲಿಗೆ ನಿಲ್ಲುವುದಿಲ್ಲ ಎಂದರು.