ಬೆಳಗಾವಿ : ಸೋಮನಟ್ಟಿ ಗ್ರಾಮದಲ್ಲಿ ಶ್ರೀ ರೇಣುಕಾ(ಯಲ್ಲಮ್ಮ) ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳಲಿದೆ. ಈಗಾಗಲೇ ಮೊದಲನೇ ಕಂತಿನಲ್ಲಿ 10 ಲಕ್ಷ ರೂ,ಗಳನ್ನು ಬಿಡುಗಡೆಗೊಳಿಸಲಾಗಿದೆ. ಕಾಮಗಾರಿ ಪ್ರಗತಿಯಾದಂತೆ ಉಳಿದ ಹಣವನ್ನೂ ಬಿಡುಗಡೆಗೊಳಿಸಲಾಗುವುದು. ಸುಂದರವಾದ ದೇವಸ್ಥಾನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.
ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ 140ಕ್ಕೂ ಹೆಚ್ಚು ದೇವಸ್ಥಾನಗಳ ಜೀರ್ಣೋದ್ಧಾರದ ಮೂಲಕ ದಾಖಲೆ ನಿರ್ಮಾಣ ಮಾಡಲಾಗಿದೆ. ಪ್ರತೀ ಊರಲ್ಲಿ ಮಂದಿರ ನಿರ್ಮಾಣಕ್ಕೆ ಹಣ ಒದಗಿಸಲಾಗಿದೆ. ಕೆಲವು ಊರುಗಳನ್ನು ಒಂದಕ್ಕಿಂತ ಹೆಚ್ಚು ದೇವಸ್ಥಾನಗಳಾಗಿವೆ. ಬೇಡಿಕೆಯಿದ್ದಲ್ಲಿ ಸಮುದಾಯ ಭವನಗಳನ್ನು ಸಹ ನಿರ್ಮಿಸಲಾಗಿದೆ. ಅನೇಕ ಕಡೆ ದೇವಸ್ಥಾನ ನಿರ್ಮಾಣದಿಂದ ಗ್ರಾಮದ ಚಿತ್ರಣವೇ ಬದಲಾವಣೆಯಾಗಿದೆ ಎಂದು ಸಚಿವರು ಹೇಳಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೆ.ಆಂಜನೇಯ, ಮುಖಂಡರಾದ ಶಂಕರಗೌಡ ಪಾಟೀಲ, ಶೇಖರ್ ಹೊಸೂರಿ, ಬಿ.ಎಂ.ಬಡಿಗೇರ್, ಶಿವಾನಂದ, ಯಲ್ಲಪ್ಪ ನಿಟ್ಟೂರ್, ಮಲ್ಲಪ್ಪ ಪೂಜೇರಿ, ಬಾಳಪ್ಪ ಮಾಸ್ತಮರ್ಡಿ, ರಾಮಪ್ಪ ನಿಟ್ಟೂರ್, ಹೊಳೆಪ್ಪ ನಂದ್ಯಾಗೋಳ, ಕಲ್ಲಪ್ಪ ಮಾಸ್ತಮರ್ಡಿ ಇದ್ದರು.