ಬಳ್ಳಾರಿ,ಆ.28.: ಅತೀ ಹಿಂದುಳಿದ ಅಲೆಮಾರಿ -ಅರೆ ಅಲೆಮಾರಿ ಸಮುದಾಯಗಳಿಗೆ ಆಗಿರುವ ಘೋರ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸುವಂತೆ ಬೆಂಗಳೂರು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಮಹಾಪೋಷಕರು ನಿರಂಜನಾರಾಧ್ಯ.ವಿ. ಪಿ, ಜಿಲ್ಲಾ ಅಧ್ಯಕ್ಷ ಜೆ. ವಿ.ಮಂಜುನಾಥ ಅವರು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.
ಪ್ರಕಟಣೆಯಲ್ಲಿ ತಿಳಿಸಿದನ ಅವರು, ಕಳೆದ ಮೂರು ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿದ್ದ ಪರಿಶಿಷ್ಟಜಾತಿಗಳಿಗೆ ‘ಒಳಮೀಸಲಾತಿ’ ಜಾರಿ ಮಾಡಿ ಸಾಮಾಜಿಕ ನ್ಯಾಯವನ್ನು ಸಮಕಾಲೀನಗೊಳಿಸಿದ ತಮಗೆ ಮತ್ತು ಸರ್ಕಾರಕ್ಕೆ ಗೌರವಪೂರ್ವಕ ಅಭಿನಂದನೆಗಳು. ಇದೊಂದು ಚಾರಿತ್ರಿಕ ತೀರ್ಮಾನ ವಾಗಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕವಾಗಿ , ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿರುವ, ಹೆಚ್ಚಿನ ಆರ್ಥಿಕ ಸವಲತ್ತುಗಳನ್ನೇ ಪಡೆಯದೆ ಹಿಂದುಳಿದಿರುವ ಸಮುದಾಯಗಳ ಬಗೆಗೆ ನೀವು ತೋರಿದ ಕಾಳಜಿ ಶ್ಲಾಘನೀಯ . ತಾವು ಈ ಹಿಂದೆ ಮುಖ್ಯ ಮಂತ್ರಿಯಾಗಿದ್ದಾಗಲೂ ತಮ್ಮ ಸರ್ಕಾರ ಈ ಸಮುದಾಯಗಳ ಕಾಳಜಿಯನ್ನು ನಿರಂತರವಾಗಿ ತೋರಿಸುತ್ತ ಬಂದಿದೆ. ಈ ಮೂರು ದಶಕಗಳ ಹೋರಾಟಕ್ಕೆ ತಾರ್ಕಿಕ ಅಂತ್ಯವನ್ನು ತಂದಿದ್ದೀರಿ . ಅದು ನಿಮ್ಮ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ನ್ಯಾಯಮೂರ್ತಿ ನಾಗಮೋಹನ್ದಾಸ್ ವರದಿಯನ್ನು ಆಧರಿಸಿ ತಾವು ಸಚಿವ ಸಂಪುಟದಲ್ಲಿ ಪ್ರವರ್ಗ ಎ, ಪ್ರವರ್ಗ ಬಿ ಹಾಗು ಪ್ರವರ್ಗ ಸಿ ಎಂದು ವಿಭಾಗಿಸಿ ಅವರವರ ಸಾಮಾಜಿಕ ಮತ್ತು ಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ನೀಡಿರುತ್ತೀರಿ. ಈ ವಿಷಯವನ್ನು ಸದನದಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದೀರಿ. ಇದು ವೈಜ್ಞಾನಿಕವಾದ ಮತ್ತು ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಕೊಡಮಾಡುವ ಮುಂದಾಲೋಚನೆಯ ಕ್ರಮವಾಗಿದೆ ಎಂದರು.
ಈ ಅಂಶಗಳನ್ನು ಹೇಳುತ್ತಲೇ , ತಾವು ನ್ಯಾಯಮೂರ್ತಿ ನಾಗಮೋಹನ್ದಾಸ್ ಆಯೋಗ ಅತಿ ಹಿಂದುಳಿದವರೆAದು ಗುರುತಿಸಿದ್ದ ಐವತ್ತೊಂಭತ್ತು ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ‘ಎ’ಎಂದು ವರ್ಗೀಕರಿಸಿ ಶೇ ೧ ರಷ್ಟು ಒಳ ಮೀಸಲಾತಿಯನ್ನು ಕಲ್ಪಿಸಲು ಶಿಫಾರಸ್ಸು ಮಾಡಿತ್ತು . ತಾವು ಇದನ್ನು ಪ್ರವರ್ಗ ‘ಸಿ’ಗೆ ಸೇರಿಸುವ ಮೂಲಕ ಈ ಸಮುದಾಯಗಳಿಗೆ ಘೋರ ಅನ್ಯಾಯವೆಸಗಿದ್ದೀರಿ ಎಂದಿದ್ದಾರೆ.
ಈ ತಬ್ಬಲಿ ಸಮುದಾಯಗಳನ್ನು ತಮ್ಮ ಸಂಪುಟ ಗುರುತಿಸಿರುವ ವಿಧಾನ ಹಾಗು ವರ್ಗೀಕರಣ ಸಮರ್ಥನೀಯವಲ್ಲ. ತಮ್ಮ ಸರ್ಕಾರದ ಈ ನಿರ್ಧಾರ ಈ ಅವಕಾಶ ವಂಚಿತ ಸಮುದಾಯವನ್ನು ಮತ್ತಷ್ಟು ಅವಕಾಶಗಳಿಂದ ವಂಚಿಸುತ್ತದೆ. ಇದರಿಂದ ಈ ಸಮುದಾಯ ಎಲ್ಲಾ ರೀತಿಯಿಂದಲೂ ಮತ್ತಷ್ಟು ವಂಚಿತರಾಗುತ್ತಾರೆ.ಇದು ನಿಮ್ಮ ಗಮನದಲ್ಲಿದೆ ಎಂದು ನಾವು ಭಾವಿಸುತ್ತೇವೆ.ಈ ತಳಸ್ತರದ ಜನರಿಗೆ ನ್ಯಾಯ ದೊರೆತಾಗ ಮಾತ್ರ ಸಾಮಾಜಿಕ ನ್ಯಾಯದ ಆಶಯ ಈಡೇರಲು ಸಾಧ್ಯ ಎಂದು ತಿಳಿಸಿದ್ದಾರೆ.
ಒಂದು ಮಟ್ಟಿಗೆ ಈಗಾಗಲೇ ಮುಂದುವರಿದ ಸಮುದಾಯಗಳ ಜೊತೆ ಸೇರಿಸಿರುವುದು ಸಾಮಾಜಿಕ ನ್ಯಾಯ ಎನಿಸುವುದಿಲ್ಲ.ಈ ಅಲೆಮಾರಿ ಸಮುದಾಯಗಳಿಗೆ ಮೊದಲೇ ಶಿಕ್ಷಣದ ಅರಿವಿಲ್ಲ . ಸಾಮಾಜಿಕ ಆರ್ಥಿಕ ಸಮಾನತೆ ದೂರದ ಮಾತು. ಈ ಸಮುದಾಯಗಳು ತಮ್ಮ ಬದುಕಿಗಾಗಿ ಹಲವು ವೇಷಗಳನ್ನು ಧರಿಸಿಕೊಂಡು ಬೀದಿಯಲ್ಲಿ ಭಿಕ್ಷೆ ಬೇಡುತಾ ಬದುಕನ್ನು ಕಟ್ಟಿಕೊಳ್ಳಲು ಊರಿಂದ ಊರಿಗೆ ತಿರುಗುವ ಪರಿಸ್ಥಿತಿ ಇದೆ. ಈ ಸಮುದಾಯಗಳು ಒಂದೆಡೆ ನೆಲೆಗೊಳ್ಳುವ ಮೂಲಕ ಘನತೆಯ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದು , ಶೈಕ್ಷಣಿಕ ಸವಲತ್ತುಗಳಿಲ್ಲದೆ, ಉದ್ಯೋಗಗಳನ್ನು ಪಡೆಯದೆ ಅಲೆಯುತ್ತಲೇ ಬದುಕನ್ನು ಸಾಗಿಸುತ್ತಿರುವ ಈ ಸಮುದಾಯಗಳ ಅಭಿವೃದ್ಧಿ ತಮ್ಮ ಸರ್ಕಾರದ ಮೊದಲ ಆದ್ಯತೆಯಾಗಬೇಕೆಂದು ನಾವು ಒತ್ತಾಯಿಸುತ್ತೇವೆ . ಈ ಹಿಂದೆ ನಿಮ್ಮ ನಾಯಕತ್ವದಲ್ಲಿಯೇ ಅಲೆಮಾರಿ ಸಮುದಾಯಗಳ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಿರಿ ಎಂದು ತಿಳಿಸಿದ್ದಾರೆ.
ಈ ಸಮುದಾಯಗಳ ಸಂಸ್ಕೃತಿ, ಆಚರಣೆ, ಬದುಕು ನಮ್ಮ ನಾಡಿನ ಜನಮಾನಸದ ಭಾಗವೇ ಆಗಿದೆ. ಅವರು ಬಳಸುವ ಭಾಷೆ, ಉಡುಗೆ ತೊಡುಗೆ, ಸಂಸ್ಕೃತಿ ಮತ್ತು ಬದುಕು ನಮ್ಮ ನಾಡಿನ ಅಸ್ಮಿತೆಗೆ ಮತ್ತಷ್ಟು ‘ಮೆರುಗು’ ನೀಡುತ್ತದೆ . ಈ ಸಮುದಾಯಗಳ ಅಭಿವೃದ್ಧಿ ನಾಡಿನ ಅಭಿವೃದ್ಧಿಯಾಗುತ್ತದೆ . ಇವರ ಬದುಕು ವೈವಿಧ್ಯತೆ ಮತ್ತು ಅಸ್ಮಿತೆಯ ಭಾಗವಾಗಿ ನಾಡಿನ ಸಾಂಸ್ಕೃತಿಕ ಪರಂಪರೆಗೆ ‘ಮೆರುಗು’ ತಂದಿದೆ. ಅಲೆಮಾರಿಗಳ ಬದುಕು ಹಸನಾಗಿ ಸುಸ್ಥಿರವಾಗಿದ್ದರೆ ಮಾರ ಅವರ ಸಂಸ್ಕೃತಿ, ಭಾಷೆ ಮತ್ತು ಆ ಸಮುದಾಯ ಉಳಿಯುತ್ತದೆ.
ಈ ಎಲ್ಲವನ್ನೂ ಅರಿತಿರುವ ತಾವುಗಳು ನ್ಯಾಯಮೂರ್ತಿ ನಾಗಮೋಹನ್ದಾಸ್ ಆಯೋಗ ಗುರುತಿಸಿದ್ದಂತೆ ಐವತ್ತೊಂಭತ್ತು ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ವರ್ಗವೆಂದು ವಿಂಗಡಿಸಿ ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕೆಂದು ನಾವು ಒಕ್ಕೊರಲಿನಿಂದ ಒತ್ತಾಯಿಸುತ್ತೇ. ನಿಮ್ಮ ನೇತೃತ್ವದ ಸರ್ಕಾರ ಈ ಅಲೆಮಾರಿ ಸಮುದಾಯಗಳಿಗೆ ಸ್ವಾಭಿಮಾನ ಮತ್ತು ಘನತೆಯಿಂದ ಬದುಕುವಂತೆ ಅನುವು ಮಾಡಿ ಅವರ ಭಾಷೆ, ಸಂಸ್ಕೃತಿ ಮತ್ತು ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಅವರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸದ್ದಾರೆ.